“ದಸರಾದಲ್ಲಿ ಊರಾಡುತ್ತಾಳೆ ಸರ್ಕಾರಿ ದುರ್ಗಮ್ಮ”…..

ದೇವತೆಯರನ್ನು ಆರಾಧಿಸುವ ದಸರಾ ಹಬ್ಬದಲ್ಲಿ ಎಲ್ಲೆಡೆ ಸ್ವತಃ ಜನರೇ ದೇವಿಯ ದೇವಸ್ಥಾನಕ್ಕೆ ಹೋಗಿ ಅವಳ ದರ್ಶನ ಪಡೆದು ಪುನೀತರಾಗುತ್ತಾರೆ. ಆದರೆ ನರೇಗಲ್ ಪಟ್ಟಣದ 6 ನೇ. ವಾರ್ಡಿನ ಬಿ.ಆರ್ ಅಂಬೇಡ್ಕರ್ ನಗರದಲ್ಲಿ ದಲಿತರ ಕಾಲೋನಿ ಯಲ್ಲಿರುವ ದುರ್ಗಾದೇವಿಯ ಆಚರಣೆ ಸಂಪೂರ್ಣ ಭಿನ್ನವಾಗಿದೆ. ಇಲ್ಲಿ ದೇವಿಯೇ ಊರಿನ ಜನರ ಓಣಿಗಯ, ಮನೆಗೆ ಬರುತ್ತಾಳೆ. ಮನೆ ಬಾಗಿಲಲ್ಲೇ ಎಲ್ಲರಿಗೂ ದರ್ಶನ ಕೊಡುತ್ತಾಳೆ ಎಂಬುದು ವಿಶೇಷವಾಗಿದೆ.ರಾಜ ಮನೆತನಗಳ ಆಳ್ವಿಕೆಯ ಕಾಲದಿಂದಲೂ ಆಚರಣೆ ಮಾಡಿಕೊಂಡು ಬಂದಿರುವ ಪರಿಶಿಷ್ಟರು ಈ ದೇವಿಯನ್ನು ಸರ್ಕಾರಿ ದುರ್ಗಮ್ಮ ಎಂದೂ ಕರೆಯುತ್ತಾರೆ. ಮಹಾಲಯ ಅಮವಾಸ್ಯೆಯೊಂದಿಗೆ ಹೂವಿನಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ದೇವಿಯನ್ನು ಕೂರಿಸಿ, ಸಿಂಗರಿಸಿ ತಮಟೆ ಬಾರಿಸುತ್ತ ಕರೆದೊಯ್ಯಲಾಗುತ್ತದೆ.

ಇಬ್ಬರೂ ದೇವಿಯ ಪಲ್ಲಕ್ಕಿಯನ್ನು ಹೊತ್ತರೆ, ಒಬ್ಬರು ಪೂಜೆ ಮಾಡುತ್ತಾರೆ. ಉಳಿದ ನಾಲ್ಕೈದು ಜನರು ದವಸ ಧಾನ್ಯ ಸಂಗ್ರಹ ಮಾಡುತ್ತಾರೆ. ಮಹಿಳೆಯರು ಜಾಪದ ಹಾಡುಗಳನ್ನು ಹಾಡಿ ದೇವಿಗೆ ಪ್ರಾರ್ಥಿಸುತ್ತಾರೆ ಎಂದು ರೇಣುಕಾ ಚಳ್ಳಮರದ, ಮುದಕವ್ವ ಚಳ್ಳಮರದ, ಕರಿಯವ್ವ ಚಳ್ಳಮರದ ಹೇಳಿದರು. ಹೀಗೆ ದೇವಿಯನ್ನು ಹೊತ್ತು ನರೇಗಲ್ ಪಟ್ಟಣ ಹಾಗೂ ಮಜರೆ ಕೋಡಿಕೊಪ್ಪ, ಕೋಚಲಾಪುರ ದ್ಯಾಂಪುರ ಗ್ರಾಮಗಳ ಪ್ರತಿ ಓಣಿಗೂ ಹೋಗಿ ಬರುತ್ತೇವೆ. ಜನರು ಮನೆ ಬಾಗಿಲಿಗೆ ಬರುವ ದೇವಿಯನ್ನು ಸ್ವಾಗತಿಸಿ, ಹೂ, ಕಾಯಿ, ನೈವೇದ್ಯ ಸಮರ್ಪಿಸುತ್ತಾರೆ. ಇದಕ್ಕೆ ಗ್ರಾಮ್ಯ ಭಾಷೆಯಲ್ಲಿ ‘ದೇವಿ ಊರು ಸುತ್ತುವುದು’ ‘ದೇವಿ ಊರು ಆಡುವುದು’ ಅಥವಾ ʼಚಳ್ಳೆ ಹೊಡೆಯುವುದುʼ ಎಂದು ಕರೆಯುತ್ತೇವೆ ಎಂದು ಸತ್ಯಪ್ಪ ಚಳ್ಳಮರದ, ಮುದಕಪ್ಪ ಮ್ಯಾಗೇರಿ, ಮಲ್ಲಪ್ಪ ಹಳ್ಳದಮನಿ ಹೇಳಿದರು.ಅಂಬೇಡ್ಕರ್ ನಗರದ ಹಿರಿಯರು ಒಂದುಕಡೆ ಸೇರಿ ದೇವಸ್ಥಾನದ ಸ್ವಚ್ಚತೆ ಕೈಗೊಂಡು ತಳಿರು, ತೋರಣಗಳಿಂದ ರಾರಾಜಿಸುವಂತೆ ಅಲಂಕರಿಸುತ್ತಾರೆ.

ನಂತರ ಹೊರಗೆ ತೆಗೆಯು ದೇವಿಯ ಪಲ್ಲಕ್ಕಿಯ ಒಂದು ಕಡೆ ಸಿಂಹದ ಮೇಲೆ ಕುಳಿತ ದುರ್ಗಮ್ಮ ಅದರ ಎದುರಿಗೆ ಕುದರೆ ಮೇಲೆ ಕುಳಿತ ದುರ್ಗಮ್ಮನ ಮೂರ್ತಿಯಿದೆ. ಒಂದು ಕೈಯಲ್ಲಿ ಖಡ್ಗ ಹಿಡಿದು ಇನ್ನೊಂದು ಕೈಯಲ್ಲಿ ಆಶೀರ್ವದಿಸುವಂತೆ ಕಾಣುತ್ತಾಳೆ. ಸೀರೆಯಿಂದ ಅಲಂಕರಿಸಿ ಬಳೆ ತೊಡಿಸಿರುತ್ತಾರೆ. ಹಣೆಗೆ ಕುಂಕುಮ, ಭಂಡಾರದ ಲೇಪನ ಇರುತ್ತದೆ. ದೇವಿಯ ಸುತ್ತಲು ಉಡಿ ತುಂಬುವ ಹಾಗೂ ಪೂಜೆಯ ಸಾಮಗ್ರಿಗಳನ್ನು ಇಟ್ಟಿರುತ್ತಾರೆ. ಪ್ರತಿ ವರ್ಷ ಆಯಾ ಓಣಿಗೆ ಹೋದಾಗ ಜನರು ಭಕ್ತಿ ಭಾವದಿಂದ ಸ್ವಾಗತಿಸಿ ಪೂಜಿಸುತ್ತಾರೆ. ನಂತರ ಹೊಲದಲ್ಲಿ ಬೆಳೆದ ಜೋಳ, ಗೋಧಿ, ಕಡಲೆ, ಹೆಸರು, ಅಕ್ಕಿ, ತಿಳಿದಷ್ಟು ಹಣಕೊಟ್ಟು ಭಕ್ತಿ ಸಮರ್ಪಿಸುತ್ತಾರೆ ಎಂದು ದೇವಿಯ ಆರಾಧಕ ದೇವೇಂದ್ರಪ್ಪ ದುರ್ಗಪ್ಪ ಚಳ್ಳಮರದ (ಪೂಜಾರಿ) ತಿಳಿಸಿದರು.

13 ದಿನ ಊರಾಡುವ ದುರ್ಗಮ್ಮನ ಎದುರು ತಮಟೆ ಸದ್ದು, ದೇವಿ ಪದ, ಪಲ್ಲಕ್ಕಿ ಮೆರವಣಿಗೆ ಕಣ್ಣಿಗೆ ರಾರಾಜಿಸುತ್ತದೆ. ಆಯುಧ ಪೂಜೆಯ ದಿನ ಎಲ್ಲ ವಿಶೇಷ ಪೂಜಾ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ವಿಜಯದಶಮಿ ದಿನ ಬನ್ನಿ ಮುಡಿದು, ಪರಸ್ಪರ ಶುಭ ಕೋರುತ್ತಾರೆ ಎಂದು ಮುತ್ತಪ್ಪ ಗೊರಕಿ, ಮಂಜಪ್ಪ ಗೊರಕಿ, ದುರಗವ್ವ ಚಳ್ಳಮರದ, ಮೂಕವ್ವ ಅಬ್ಬಿಗೇರಿ ಹೇಳಿದರು.
ಬಾಕ್ಸ್:-
ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸಿದಾಗ ಆರಂಭವಾದ ಆಚರಣೆ ಕೇವಲ ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಕಂಡು ಬರುವ ಊರಾಡುವ ಹಬ್ಬ ನರೇಗಲ್‌ನಲ್ಲೂ ಆಚರಣೆ ಯಲ್ಲಿರುವುದು ಇಲ್ಲಿನ ಪರಿಶಿಷ್ಟರಿಗೆ ಬಹಳ ವಿಶೆಷವಾಗಿದೆ. ಹಿಂದೆ ಮೇಲ್ವರ್ಗದವರು ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸಿದಾಗ ಪರಿಶಿಷ್ಟರು ತಮ್ಮ ಸ್ಥಳೀಯ ದೇವತೆಗಳನ್ನು ಪೂಜಿಸಲು ಆರಂಭಿಸಿದರು. ದೇವಿಯನ್ನು ಹೆಗಲ ಮೇಲೆ ಹೊತ್ತು ಊರುರು ತಿರುಗಿದರು. ಆಚರಣೆಯಿಂದ ಬಂದ ಕಾಳುಕಡಿಯಿಂದ ಜೀವನ ನಡೆಸಿದರು. ಅಂದಿನಿಂದ ಆ ಪರಂಪರೆ ಇಂದಿಗೂ ಹಾಗೆಯೇ ಮುಂದುವರಿದಿದೆ. ಇದು ನಮ್ಮ ನೆಲದ ವೈಶಿಷ್ಟ್ಯ ಹಾಗೂ ಪರಿಶಿಷ್ಟರ ಕಷ್ಟದ ದಿನಗಳ ಕತೆಯಾಗಿದೆ ಎನ್ನುತ್ತಾರೆ
ಶಿಕ್ಷಕ ಡಿ.ಎಚ್. ಪರಂಗಿ.
ಕೋಟ್:-1
ನಾಲ್ಕನೇ ತಲೆಮಾರಿನಿಂದ ಊರಾಡುವ ಸರ್ಕಾರಿ ದುರ್ಗಮ್ಮನ ಆಚರಣೆಯಿಂದ ಮಾಡಿಕೊಂಡು ಬಂದಿದ್ದೇವೆ ಇದು ನಮ್ಮ ಪರಂಪರೆಯ ಪ್ರತೀಕವಾಗಿದೆ
–
ಶಂಕ್ರವ್ವ ಚಳ್ಳಮರದ, ಹಿರಿಯ ಮಹಿಳೆ
ಕೋಟ್:-2
ನಾಲ್ಕನೇ ತಲೆಮಾರಿನಿಂದ ಊರಾಡುವ ಸರ್ಕಾರಿ ದುರ್ಗಮ್ಮನ ಆಚರಣೆಯಿಂದ ಮಾಡಿಕೊಂಡು ಬಂದಿದ್ದೇವೆ ಇದು ನಮ್ಮ ಪರಂಪರೆಯ ಪ್ರತೀಕವಾಗಿದೆ
–
ಶಂಕ್ರವ್ವ ಚಳ್ಳಮರದ, ಹಿರಿಯ ಮಹಿಳೆ
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ತೋಟಗುಂಟಿ.ಗೋಗೇರಿ.ಗದಗ