ಅಹಿಂದ ಚಳವಳಿಯಿಂದ ಮಹಿಳಾ ಸಬಲೀಕರಣ – ಕೋಮಲ.
ಮೂಡಿಗೆರೆ ಅ.31

ಮಹಿಳೆಯರು ವಿಚಾರವಂತರಾಗ ಬೇಕೆಂದರೆ ಬುದ್ಧ ಬಸವ ಅಂಬೇಡ್ಕರ್ ಅವರ ಕುರಿತು ತಿಳುವಳಿಕೆ ಮೂಡಿಸಬೇಕು. ಹಬ್ಬಗಳ ಆಚರಣೆಯ ಬಗ್ಗೆ ಅರಿತು ಕೊಳ್ಳಬೇಕು ಎಂದು ಅಹಿಂದ ಚಳುವಳಿಯ ಜಿಲ್ಲಾ ಸಂಚಾಲಕಿಯಾದ ಕೋಮಲ ರವರು ಹೇಳಿದರು. ಅವರು ಮೂಡಿಗೆರೆ ತಾಲ್ಲೂಕು ಪಾಲ್ಗುಣಿ ಪಂಚಾಯ್ತಿ ವ್ಯಾಪ್ತಿಯ ಬಂಕೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಅಹಿಂದ ಚಳುವಳಿಯ ಮಹಿಳಾ ಘಟಕದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಾತೆ ಸಾವಿತ್ರಿಬಾಯಿ ಫುಲೆಯವರು 150 ವರ್ಷಗಳ ಹಿಂದೆ ಮಹಿಳೆಯರಿಗೆ ಶಿಕ್ಷಣ ಕೊಟ್ಟು ಮಹಿಳೆಯರ ಬದುಕಿಗೆ ಬೆಳಕಾಗಿದ್ದಾರೆ, ಎಲ್ಲರೂ ಶಿಕ್ಷಣ ಪಡೆದು ಅಹಿಂದ ಚಳುವಳಿಯಿಂದ ಮಹಿಳಾ ಸಬಲೀಕರಣದ ಜೊತೆಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು. ಮೂಡಿಗೆರೆ ತಾಲ್ಲೂಕು ಸಂಚಾಲಕಿಯಾದ ಜಯಶ್ರೀ ರವರು ಮಾತನಾಡಿ ಮಹಿಳೆಯರು ಸ್ವಯಂ ಇಚ್ಛೆಯಿಂದ ಸಂಘಟಿತರಾಗಬೇಕು, ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಸಂಘದ ಸದಸ್ಯತ್ವ ಪಡೆದು ಕೊಳ್ಳಬೇಕು ಎಂದು ಹೇಳಿದರು. ಬಣಕಲ್ ಹೋಬಳಿ ಸಂಚಾಲಕಿಯಾದ ಲವೀಶ ರವರು, ಬಂಕೇನಹಳ್ಳಿ ಗ್ರಾಮದ ಯಶೋಧ, ವಿಜಯಲಕ್ಷ್ಮಿ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು