ವರುಣನ ರೌದ್ರಾವತಾರಕ್ಕೆ ನಲುಗಿದ ಜಕ್ಕಲಿ, ಬೂದಿಹಾಳ ಗ್ರಾಮ ಪಂಚಾಯಿತಿ ಸಭೆಯಲ್ಲಿ – ಹಾನಿ ಪರಿಶೀಲಿಸಿದ ಅಧಿಕಾರಿಗಳು.

ಜಕ್ಕಲಿ ಏ.23

ರೋಣ ತಾಲೂಕಿನ ಸಮೀಪದ ಜಕ್ಕಲಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ಬಿರುಗಾಳಿ ಸಹಿತ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ ಗೊಂಡಿದೆ.

ಪ್ರಕೃತಿಯ ವಿಕೋಪಕ್ಕೆ ಸರ್ಕಾರಿ ಕಟ್ಟಡಗಳು, ಶಾಲೆ, ವಿದ್ಯುತ್ ಕಂಬಗಳು ಹಾಗೂ ಮರ ಗಿಡಗಳು ನೆಲ ಸಮವಾಗಿದ್ದು, ಅಪಾರ ಪ್ರಮಾಣದ ಆಸ್ತಿ ಹಾನಿ ಸಂಭವಿಸಿದೆ. ಹಾನಿ ಗೊಳಗಾದ ಪ್ರದೇಶಗಳಿಗೆ ಬುಧವಾರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಗ್ರಾಮ ಪಂಚಾಯಿತಿಯಲ್ಲಿ ತುರ್ತು ಸಭೆ ಅಧಿಕಾರಿಗಳ ಸೂಚನೆ ಘಟನೆಯ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ತುರ್ತು ಸಭೆ ನಡೆಸಲಾಯಿತು.

ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ್ ಕಂದಕೂರ್ ಮಾತನಾಡಿ, ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಪಿ.ಡಿ.ಓ ಮತ್ತು ಸಿಬ್ಬಂದಿ ತಕ್ಷಣ ಕ್ರಮ ಕೈಗೊಳ್ಳಬೇಕು. ಪ್ರತಿ ವಾರ್ಡಿಗೂ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶ್ರಮಿಸಬೇಕು, ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ರೋಣ ತಹಶೀಲ್ದಾರ್ ನಾಗರಾಜ್ ಕೆ. ಅವರು ಹಾನಿಯ ವರದಿ ಕುರಿತು ಮಾತನಾಡಿ,ಗ್ರಾಮ ಲೆಕ್ಕಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಹಾನಿಯಾದ ಮನೆಗಳ ವರದಿಯನ್ನು ಆದ್ಯತೆಯ ಮೇಲೆ ಸಿದ್ಧ ಪಡಿಸಬೇಕು. ನಂತರ ಬೆಳೆ ಹಾನಿಯ ವರದಿ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗುವುದು. ವಿದ್ಯುತ್ ಇಲಾಖೆಯವರು ತಕ್ಷಣವೇ ಬಿದ್ದಿರುವ ಕಂಬಗಳನ್ನು ಸರಿಪಡಿಸಿ ಸಂಪರ್ಕ ಕಲ್ಪಿಸಬೇಕು ಎಂದು ಆದೇಶಿಸಿದರು.

ಸುಮಾರು 22 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಇಡೀ ಗ್ರಾಮ ಕತ್ತಲೆಯಲ್ಲಿ ಮುಳುಗಿದೆ. ಜೆಸಿಬಿ ಯಂತ್ರಗಳ ಮೂಲಕ ಕಂಬಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಇಲ್ಲಿನ ಸರ್ಕಾರಿ ಶಾಲೆಯ ಹಳೆಯ ಕೊಠಡಿಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಶಾಲಾ ಆವರಣದ ದಶಕಗಳ ಹಳೆಯ ಮರಗಳು ಬುಡ ಸಮೇತ ಕಿತ್ತು ಬಂದಿವೆ. ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ಅಂದಪ್ಪ ರಾಮಪ್ಪ ಮಾದರ ಹಾಗೂ ಸಮಿತಿಯವರು ಶಾಲೆಯ ದುರಸ್ತಿಗೆ ಮನವಿ ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಕಾರ್ಯಾಲಯದ ಮೇಲ್ಛಾವಣಿಯ ತಗಡುಗಳು ಹಾರಿ ಹೋಗಿದ್ದು, ಕಚೇರಿಯ ದಾಖಲೆಗಳಿಗೆ ಮಳೆ ನೀರು ತಾಗಿ ಹಾನಿಯಾಗಿರುವ ಆತಂಕ ಎದುರಾಗಿದೆ.ಹಲವು ಮನೆಗಳ ಛಾವಣಿ ಹಾರಿ ಹೋಗಿವೆ. ಜಮೀನುಗಳಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣ ನೆಲ ಸಮವಾಗಿದ್ದು, ರೈತರು ಕಣ್ಣೀರು ಹಾಕುತ್ತಿದ್ದಾರೆ.

ಈ ಸಂದರ್ಭದಲ್ಲಿ ಹೆಸ್ಕಾಂ ಎಇಇ ರಾಘವೇಂದ್ರ ಕೊಚ್ಚಿ, ನರೇಗಲ್ ಶಾಖಾಧಿಕಾರಿ ವಿರುಪಾಕ್ಷಪ್ಪ ಸರ್ವಿ, ಪಿ.ಡಿ.ಓ ಬಿ.ಎನ್ ಬಚ್ಚೇನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಜಗದೀಶ್, ಪವರ್‌ ಮ್ಯಾನ್ ಮಹೇಶ್ ಹಡಪದ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಇಷ್ಟೊಂದು ದೊಡ್ಡ ಮಟ್ಟದ ಅವಾಂತರ ಸಂಭವಿಸಿದರೂ ಯಾವುದೇ ಪ್ರಾಣಾಪಾಯ ಸಂಭವಿಸದಿರುವುದು ಗ್ರಾಮಸ್ಥರಿಗೆ ಸಮಾಧಾನದ ಸಂಗತಿ ಯಾಗಿದೆ. ಆದಷ್ಟು ಬೇಗ ತಾಲೂಕು ಆಡಳಿತ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button