ವಿಶ್ವಮಾನವ ಬಸವಣ್ಣನವರ ಆರಾಧಕರಲ್ಲೇ ಜಾತಿಗಳಿರುವುದು ದುಃಖಕರ- ಕವಿ, ಡಾ, ಜಯಪ್ಪ ಹೊನ್ನಾಳಿ.
ಸುತ್ತೂರು ಏ.22

ಜಾತಿ, ಮತ, ಕುಲ, ಲಿಂಗ, ವರ್ಗ ಭೇದಗಳಿರದ ವಿಶ್ವಮಾನವ ಧರ್ಮವನ್ನು 12 ನೇ. ಶತಮಾನದಲ್ಲೇ ಕಟ್ಟ ಹೊರಟಿದ್ದ ಬಸವಣ್ಣನವರ ಆರಾಧಕರಲ್ಲೇ, 21 ನೇ. ಶತಮಾನದಲ್ಲೂ ಅನೇಕ ಜಾತಿ ಒಳ ಜಾತಿಗಳಿರುವುದು ಅತ್ಯಂತ ದುಃಖಕರ ವಿಚಾರ ಎಂದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷರಾದ ಕವಿ ಡಾ, ಜಯಪ್ಪ ಹೊನ್ನಾಳಿ ಹೇಳಿದರು.
ಮೈಸೂರಿನ ಕದಳಿ ಮಹಿಳಾ ವೇದಿಕೆ ಯು ಮೈಸೂರು ಜಿಲ್ಲೆಯ ಸುತ್ತೂರಿನ ಡಾ, ಶ್ರೀ ಶಿವರಾತ್ರಿ ರಾಜೇಂದ್ರ ಶಿಕ್ಷಣ ಸಮಚ್ಛಯದಲ್ಲಿರುವ ಅಲ್ಲಮ ಪ್ರಭು ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀ ಬಸವೇಶ್ವರ ಜಯಂತಿ ಹಾಗೂ ಅಕ್ಕಮಹಾದೇವಿ ಜಯಂತಿ ಸಮಾರಂಭದಲ್ಲಿ ಬಸವಣ್ಣನವರ ಕುರಿತು ಉಪನ್ಯಾಸ ನೀಡುತ್ತಿದ್ದ ಅವರು, ಮನು ಧರ್ಮ ಸಿದ್ಧಾಂತ ಅಲ್ಲಗಳೆದು, ಕಾಯಕ ಸಿದ್ಧಾಂತ ಕಾರ್ಯಗತ ಗೊಳಿಸಿದ ಬಸವಣ್ಣ, ಜಾತಿಯ ವಿಷದ ಕಳೆಯನ್ನು ಬೇರು ಸಮೇತ ಕಿತ್ತೊಗೆಯಲು ಅಂತರ್ಜಾತಿ ವಿವಾಹ ವೇರ್ಪಡಿಸಿ, ಆ ಮೂಲಕ ಜಾತಿ ರಹಿತ ಸಮಾಜದ ಸೃಷ್ಟಿಗೆ ಮುಂದಾಗಿದ್ದರು.
ಆದರಿಂದು ಅವರ ಅನುಯಾಯಿಗಳಾದ ನಮ್ಮಲ್ಲೇ ಜಾತಿ ಒಳಜಾತಿ ಭೇದಗಳಿರುವುದು ತುಂಬಾ ಬೇಸರದ ವಿಚಾರ, ಈಗಲಾದರೂ ಆತ್ಮಾವಲೋಕನ ಮಾಡಿಕೊಂಡು, ಅಂತರ್ಜಾತಿ ವಿವಾಹಗಳಿಗೆ ಅವಕಾಶ ಕಲ್ಪಿಸಿ, ನಾವೆಲ್ಲರೂ ಒಂದಾಗಬೇಕಿದೆ ಎಂದರು.
ವ್ಯಷ್ಟಿ ಪ್ರಜ್ಞೆಯಿಂದ ಹೊರತಾಗಿ, ಸಮಷ್ಟಿ ಪ್ರಜ್ಞೆಯಿಂದ ಬದುಕುವುದೇ ಬಸವಣ್ಣನವರ ಜೀವನ ಮೌಲ್ಯವಾಗಿತ್ತು, ಅದರಿಂದಾಗಿಯೇ ಅವರು ಯಾರಿಗೂ ಇವನಾರವ ಇವನಾರವ ಎನ್ನದೇ, ಎಲ್ಲರಿಂದ ಇವ ನಮ್ಮವ ಇವ ನಮ್ಮವ ಎಂದೆನಿಸಿ, ಕೂಡಲ ಸಂಗಮನ ಮನೆಯ ಮಗನೆಂದೆನಿಸಿದರು, ಹಾಗಾಗಿಯೇ ಅವರು ಬರೆಯ ಬಹುದಾದದ್ದನ್ನು ಬದುಕಿ, ಬದುಕ ಬಹುದಾದದ್ದನ್ನು ಬರೆದರು, ಆ ಮೂಲಕ ಕಾಲಾತೀತರಾಗಿ, ವಿಶ್ವ ಗುರುವೆನಿಸಿ, ಕರ್ನಾಟಕದ ಸಾಂಸ್ಕೃತಿಕ ನಾಯಕರೆನಿಸಿದರು ಎಂದು ತಿಳಿಸಿದರು.
ದೀಪ ಬೆಳಗುವ ಮೂಲಕ ಜೆ.ಎಸ್.ಎಸ್ ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಜಿ.ಎಲ್ ತ್ರಿಪುರಾಂತಕ ಸಮಾರಂಭ ಉದ್ಘಾಟಿಸಿ, ಸಭಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಸವ ಜಯಂತಿಯ ಹಾಗೂ ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿ.ವಿ ಅಕ್ಕಮಹಾದೇವಿ ಸಂಶೋಧನೆ ಮತ್ತು ವಿಸ್ತರಣಾ ಪೀಠದ ನಿರ್ದೇಶಕರಾದ ಪ್ರೊ. ಕವಿತಾ ರೈ ಅಕ್ಕಮಹಾದೇವಿಯ ಸಾಧನೆ ಸಿದ್ಧಿಯ ಕುರಿತು ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಶೋಭಾರಾಣಿ ಜೈಪ್ರಕಾಶ್ ಸ್ವಾಗತಿಸಿದರು, ಶ್ರುತಿ ಆರ್ ಎಂ ಹಾಗೂ ಕುಮಾರಿ ವಿನ್ಮಯಿ ಪ್ರಾರ್ಥನೆ ಮಾಡಿದರು, ಕದಳಿ ವೇದಿಕೆಯ ಕಾರ್ಯದರ್ಶಿ ಭವಾನಿ ನಟರಾಜ್, ಖಜಾಂಚಿ ಸುಜಾತ ಬಸವರಾಜ್, ಕಲ್ಯಾಣಿ ನಟರಾಜ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಬಿ.ಎಡ್. ಕಾಲೇಜಿನ ಪ್ರಶಿಕ್ಷಣಾರ್ಥಿಗಳು, ಕಾಲೇಜು ಗುರುಬಳಗದವರು, ಆಡಳಿತ ಸಿಬ್ಬಂದಿಯವರೊಂದಿಗೆ ಹಾಗೂ ಸಭೀಕರೊಂದಿಗೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ
