ಮಾತೃತ್ವದ ಸಾಕಾರ ಮೂರ್ತಿ ಶ್ರೀಮಾತೆ ಶಾರದಾ ದೇವಿ – ಹೆಚ್.ಲಕ್ಷ್ಮೀದೇವಮ್ಮ ಅಭಿಪ್ರಾಯ.
ಚಳ್ಳಕೆರೆ ಮಾ.27

ಮಾತೃತ್ವದ ಸಾಕಾರ ಮೂರ್ತಿ ಶ್ರೀಮಾತೆ ಶಾರದಾದೇವಿ ಎಂದು ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಹೆಚ್.ಲಕ್ಷ್ಮೀದೇವಮ್ಮ ಅಭಿಪ್ರಾಯಪಟ್ಟರು. ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ ಅವರ ವಾಲ್ಮೀಕಿ ನಗರದ ಸಹ್ಯಾದ್ರಿ ನಿವಾಸದಲ್ಲಿ ಹಮ್ಮಿಕೊಂಡಿದ್ದ ವಾರದ ಸತ್ಸಂಗ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಶ್ರೀಮಾತೆ ಶಾರದಾದೇವಿ ಅವರ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರು ಇಡೀ ವಿಶ್ವದ ತಾಯಿಯಾಗಿದ್ದರು. ಶ್ರೀರಾಮಕೃಷ್ಣ ಪರಮಹಂಸರೆಂಬ ಬಾಲ್ಯಭಾವದ ಪತಿಗೆ ಮಾತೃಭಾವದ ಸತಿ ಶಾರದಾ ದೇವಿಯಾಗಿದ್ದರು ಎಂದು ಶ್ರೀಮಾತೆಯವರ ವಿಶ್ವವ ತಬ್ಬುವ ವಾತ್ಸಲ್ಯದ ಬಗ್ಗೆ ವಿವಿಧ ಘಟನೆಗಳ ಮೂಲಕ ವಿವರಿಸಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮ ರಕ್ಷಾ ಸ್ತೋತ್ರ ಪಠಣ, ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು. ಈ ಸತ್ಸಂಗದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ, ಮೋಹಿನಿ, ವಸಂತಕುಮಾರಿ, ಗೀತಾ ನಾಗರಾಜ್, ಸುಜಾತ, ಬಿ.ಟಿ.ಗಂಗಾಂಬಿಕೆ, ಗಿರಿಜಾಮ್ಮ, ಯತೀಶ್.ಎಂ ಸಿದ್ದಾಪುರ, ಪ್ರಿಯಾಂಕ ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.
ವರದಿ:ಯತೀಶ್.ಎಂ.ಸಿದ್ದಾಪುರ, ಚಳ್ಳಕೆರೆ.