ಸಕಲ ಜೀವಿಗಳ ಮೇಲಣ ಶ್ರೀಮಾತೆಯವರ ಮಾತೃ ವಾತ್ಸಲ್ಯ ಅಗಾಧವಾದದ್ದು – ಶ್ರೀಮತಿ ಎಂ.ಗೀತಾ ನಾಗರಾಜ್ ಅಭಿಪ್ರಾಯ.
ಚಳ್ಳಕೆರೆ ಏ.15

ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಕಾರ್ಯಕ್ರಮಗಳಿಗೆ ನಿರಂತರವಾಗಿ ತುಂಬು ಹೃದಯದಿಂದ ಧನ ಸಹಾಯ ಮಾಡುವ ಶ್ರೀಮತಿ ಎಂ.ಲಕ್ಷ್ಮೀದೇವಮ್ಮ ತಿಪ್ಪೇಸ್ವಾಮಿ ಅವರಿಗೆ ದಿವ್ಯತ್ರಯರ ಭಾವ ಚಿತ್ರ ಮತ್ತು ಶ್ರೀರಾಮರಕ್ಷಾ ಸ್ತೋತ್ರ ಪುಸ್ತಕದ ಜೊತೆಗೆ ಸಿಹಿ ವಿತರಿಸಿದ ಶ್ರೀಮತಿ ಎಚ್.ಲಕ್ಷ್ಮೀದೇವಮ್ಮ ಮತ್ತು ಎಂ.ಗೀತಾ ನಾಗರಾಜ್ ಅವರು.

ಸೊಗಸಾದ ಭಜನೆಗಳನ್ನು ಹೇಳಿ ಕೊಟ್ಟ ಶ್ರೀಮತಿ ನೇತ್ರಾ ಮಂಜುನಾಥ ಮತ್ತು ಚಿನ್ನಮ್ಮ ಅವರಿಗೆ ದಿವ್ಯತ್ರಯರ ಭಾವ ಚಿತ್ರ ಮತ್ತು ಶ್ರೀಹನುಮಾನ್ ಚಾಲೀಸಾ, ಶಕ್ತಿ ಶಾಲೀ ವ್ಯಕ್ತಿತ್ವ ನಿರ್ಮಾಣ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಸುಕ್ಷಣಗಳು.
ಶ್ರೀಮಾತೆ ಶಾರದಾದೇವಿಯವರು ಸಕಲ ಜೀವಿಗಳ ಮೇಲೆ ಹರಿಸುತ್ತಿದ್ದ ಮಾತೃವಾತ್ಸಲ್ಯ ಅನಂತವಾದದ್ದು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಉಪಾಧ್ಯಕ್ಷರಾದ ಶ್ರೀಮತಿ ಎಂ ಗೀತಾ ನಾಗರಾಜ್ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆ ನಡೆಸಿ ಕೊಟ್ಟ ಅವರು “ಶ್ರೀಮಾತೆ ಶಾರದಾದೇವಿಯವರ ಅಗಾಧ ಮಾತೃ ವಾತ್ಸಲ್ಯ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.

ಶಾರದಾಮಾತೆಯವರ ಸಮಗ್ರ ಜೀವನವನ್ನು ಅಧ್ಯಯನ ಮಾಡಿದಾಗ ಅವರ ಮಾತೃ ವಾತ್ಸಲ್ಯ ಕೇವಲ ಮನುಷ್ಯರ ಮೇಲಷ್ಟೇ ಹರಿಯದೆ ಜಗತ್ತಿನ ಸಕಲ ಪ್ರಾಣಿ-ಪಕ್ಷಿಗಳ ಮೇಲೆಯೂ ಹರಿಯುತ್ತಿತ್ತು ಎಂಬುದು ಗೊತ್ತಾಗುತ್ತದೆ. ಅವರ ಮನೆಯಲ್ಲಿದ್ದ ಬೆಕ್ಕು, ಕರು, ಅನಾಥ ಹುಡುಗ ಗೋವಿಂದನ ಮೇಲಣ ಅವರ ವಾತ್ಸಲ್ಯ ಅಪರಿಮಿತವಾದದ್ದು ಎಂದರು.
ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಶ್ರೀಮತಿ ನೇತ್ರಾ ಮಂಜುನಾಥ, ಚಿನ್ನಮ್ಮ, ತಿಪ್ಪಮ್ಮ ಉಮಾಶಂಕರ್ ಅವರಿಂದ ವಿಶೇಷ ಭಜನೆಗಳು, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ದಿವ್ಯತ್ರಯರಿಗೆ ಮಂಗಳಾರತಿ,ಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗ ಕಾರ್ಯಕ್ರಮದಲ್ಲಿ ಎಚ್ ಲಕ್ಷ್ಮೀದೇವಮ್ಮ, ಎಂ ಲಕ್ಷ್ಮೀದೇವಮ್ಮ ತಿಪ್ಪೇಸ್ವಾಮಿ, ಅರುಣ, ಪ್ರೇಮಾ, ಸರಸ್ವತಿ ರಾಜು, ಸರಸ್ವತಿ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

