ಅವೈಜ್ಞಾನಿಕ ಚತುಷ್ಪಥ ರಸ್ತೆ ಕಾಮಗಾರಿಜು.29 ರಂದು – ಬಂದ್‌ಗೆ ಕರೆ.

ಮಾನ್ವಿ ಜು.24

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನ್ವಿ ನಾಗರಿಕರ ಹಿತ ರಕ್ಷಣಾ ವೇದಿಕೆ ವತಿಯಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಹಾಗೂ ವಕೀಲ ಎನ್. ತಿಪ್ಪಣ್ಣ ಬಾಗಲವಾಡ, ಕಲ್ಮಲದಿಂದ ಸಿಂಧನೂರು ವರೆಗೆ ಸುಮಾರು ₹1,700 ಕೋಟಿ ವೆಚ್ಚದಲ್ಲಿ KRDCL ವತಿಯಿಂದ ನಿರ್ಮಿಸಲಾಗುತ್ತಿರುವ ಚತುಷ್ಪಥ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಇಲಾಖೆಯ ಡಿಪಿಆರ್ ನಿಯಮಗಳನ್ನು ಪಾಲಿಸದೆ, ಅವೈಜ್ಞಾನಿಕ ಹಾಗೂ ಕಳಪೆ ರೀತಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

ರಸ್ತೆಯ ಮಧ್ಯಭಾಗದಿಂದ ಎರಡೂ ಕಡೆ ನಿಗದಿತ ಅಗಲದಲ್ಲಿ ರಸ್ತೆ ನಿರ್ಮಾಣ ಮಾಡದೇ ರಸ್ತೆಯನ್ನು ಕಿರಿದಾಗಿಸಲಾಗಿದೆ. ಪಟ್ಟಣದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆಯನ್ನು ನಿರ್ಮಿಸದೇ ಇರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ರಸ್ತೆ ಬದಿಯ ಚರಂಡಿಗಳನ್ನು ಅತೀ ಚಿಕ್ಕದಾಗಿ ನಿರ್ಮಿಸಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದೆ ಬಡಾವಣೆಗಳ ಮನೆಗಳಿಗೆ ನುಗ್ಗುವ ಅಪಾಯವಿದೆ. ಅಲ್ಲದೆ, ಚರಂಡಿಗಳನ್ನು ರಾಜ ಕಾಲುವೆಗಳಿಗೆ ಸಂಪರ್ಕಿಸಿಲ್ಲ ಎಂದು ದೂರಿದರು.

ರಾಯಚೂರು ರಸ್ತೆಯ ಲಕ್ಷ್ಮೀ ದೇವಸ್ಥಾನದ ಬಳಿ ರಸ್ತೆ ತಿರುವಿನಲ್ಲಿ ಅಗಲವನ್ನು ಕಡಿಮೆ ಮಾಡಿರುವುದು ಹಾಗೂ ಪಾದಚಾರಿಗಳ ಅನುಕೂಲಕ್ಕಾಗಿ ಮೇಲ್ಸೇತುವೆ ನಿರ್ಮಿಸದಿರುವುದು ಅಪಘಾತಗಳಿಗೆ ಕಾರಣ ವಾಗಬಹುದು. ಕಾಮಗಾರಿ ನಿಯಮಾನುಸಾರ ನಡೆಯದಿದ್ದರೂ KRDCL ಅಧಿಕಾರಿಗಳು ಪರಿಶೀಲನೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

ಪಟ್ಟಣದ ಪ್ರವೇಶ ಭಾಗದಲ್ಲಿರುವ ಮೇಜರ್ ಶಾಹನವಾಜ್ ಖಾನ್ ವೃತ್ತ, ಡಾ, ಬಾಬು ಜಗಜೀವನ್ ರಾಮ್ ವೃತ್ತ, ಡಾ, ಬಿ.ಆರ್. ಅಂಬೇಡ್ಕರ್ ವೃತ್ತ, ಶ್ರೀ ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಛತ್ರಪತಿ ಶಿವಾಜಿ ವೃತ್ತ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ಸೇರಿದಂತೆ ವಿವಿಧ ಮಹನೀಯರ ವೃತ್ತಗಳನ್ನು ಅಭಿವೃದ್ಧಿ ಪಡಿಸಿ ಕಂಚಿನ ಪುತ್ಥಳಿಗಳನ್ನು ಸ್ಥಾಪಿಸಬೇಕು. ಜೊತೆಗೆ ಅವೈಜ್ಞಾನಿಕ ರಸ್ತೆ ಕಾಮಗಾರಿಯನ್ನು ತಕ್ಷಣ ನಿಲ್ಲಿಸಿ ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಜುಲೈ 29 ರಂದು ಮಾನ್ವಿ ನಾಗರಿಕರ ಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ “ಮಾನ್ವಿ ಬಂದ್” ಹಾಗೂ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರಭುರಾಜ ಕೋಡ್ಲಿ, ಶೇಖ್ ಫರೀದ್ ಉಮ್ರಿ, ಕೆ. ನಾಗಲಿಂಗಸ್ವಾಮಿ, ಹರಿಹರ ಪಾಟೀಲ್, ಹೆಚ್. ದೇವರಾಜ್, ಸುಬಾನ್ ಬೇಗ್, ಡಿ. ಬಸವನಗೌಡ, ಶಿವರಾಜ್ ಜಾನೇಕಲ್, ಹನುಮಂತಕೋಟೆ, ಶಹನಾವಾಜ್, ಲಕ್ಷ್ಮಣ್ ಜಾನೇಕಲ್, ಶರಣು ಮುದ್ದಂಗುಂಡಿ, ನುಸರತ್, ಮೆಹಬೂಬ್ ಕುರೇಶಿ, ನಾಸೀರ್ ಅಲಿ ಕುರೇಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button