ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ 135 ನೇ. ಜಯಂತಿ – ಪ್ರತಿಭಾವಂತರಿಗೆ ಸನ್ಮಾನಿಸಲಾಯಿತು.
ಅರಹುಣಸಿ ಏ.29

ರೋಣ ತಾಲೂಕಿನ ಅರಹುಣಸಿ ಗ್ರಾಮದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಹಾಗೂ ಡಾ, ಬಿ.ಆರ್ ಅಂಬೇಡ್ಕರ್ ಯುವಕ ಮಂಡಳದ ಸಂಯುಕ್ತಾಶ್ರಯದಲ್ಲಿ ವಿಶ್ವ ಜ್ಞಾನಿ ಡಾ, ಬಿ.ಆರ್ ಅಂಬೇಡ್ಕರ್ ಅವರ 135 ನೇ. ಜಯಂತ್ಯೋತ್ಸವ ಕಾರ್ಯಕ್ರಮವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗದಗ ಜಿಲ್ಲಾ ದಲಿತ ಮುಖಂಡ ಶರೀಫ್ ಬಿಳೆಯಲ್ಲಿ ಅವರು ಮಾತನಾಡಿ, ಇಂದು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವದಿಂದ, ಶಾಂತಿಯುತವಾಗಿ ಬದುಕುತ್ತಿದ್ದರೆ ಅದಕ್ಕೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ. ಕೇವಲ ಮೌಢ್ಯತೆಯಿಂದ ನ್ಯಾಯ ಸಿಗುವುದಿಲ್ಲ. ಮನೆಯಲ್ಲಿರುವ ಕಲ್ಪಿತ ದೇವತೆಗಳ ಫೋಟೋಗಳಿಗಿಂತ, ಈ ದೇಶಕ್ಕೆ ದಾರಿ ದೀಪವಾದ ಬುದ್ಧ, ಬಸವ, ಅಂಬೇಡ್ಕರ್ ಅವರ ಫೋಟೋಗಳನ್ನಿಟ್ಟು ಪೂಜಿಸಿ. ಅಂದಾಗ ಮಾತ್ರ ಸಮಾಜದಲ್ಲಿ ಪ್ರಬುದ್ಧತೆ ಬರಲು ಸಾಧ್ಯ, ಎಂದು ನುಡಿದರು.
ಉಪನ್ಯಾಸ ನೀಡಿದ ಪ್ರಾಂಶುಪಾಲ ಶಂಕರ ಎಚ್. ಛಲವಾದಿ ಅವರು ಮಾತನಾಡಿ, ಬಾಬಾ ಸಾಹೇಬರು ನಮಗೆ ನೀಡಿದ ಅತಿ ದೊಡ್ಡ ಅಸ್ತ್ರವೆಂದರೆ ಅದು ಶಿಕ್ಷಣ. ಸಂಘಟನೆ ಮತ್ತು ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆದು ಕೊಳ್ಳಬೇಕು,ಎಂದು ಕರೆ ನೀಡಿದರು.
ದಲಿತ ವಿದ್ಯಾರ್ಥಿ ಪರಿಷತ್‌ನ ಬೆಳಗಾವಿ ವಿಭಾಗೀಯ ಅಧ್ಯಕ್ಷ ಸುರೇಶ ಛಲವಾದಿ ಹಾಗೂ ಶೋಷಿತ ಸಮಾಜದ ಚಿಂತಕ ಪರಶುರಾಮ ಯಾವಗಲ್ಲ ಅವರು ಅಂಬೇಡ್ಕರ್ ಅವರ ಹೋರಾಟದ ಹಾದಿಯನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಧಾನ ಗುರುಗಳಾದ ಡಿ. ಜಿ. ಗೊಂದಿ ಅವರು ಮಾತನಾಡಿ, ಗ್ರಾಮದ ಯುವಕರು ಸಂಘಟಿತವಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಅಂಬೇಡ್ಕರ್ ಅವರನ್ನೇ ಮಾದರಿಯಾಗಿಟ್ಟುಕೊಂಡು ಉನ್ನತ ಸಾಧನೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ದಲಿತ ಕಲಾತಂಡದವರು ಕ್ರಾಂತಿ ಗೀತೆಗಳನ್ನು ಹಾಡಿ ಜನರಲ್ಲಿ ಜಾಗೃತಿ ಮೂಡಿಸಿದರು. ಶ್ರೀ ಶಿವಯ್ಯಸ್ವಾಮಿ ಬಿ. ಮರಿದೇವಮಠ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ವಂದಿಸಿದರು.
ಕಾರ್ಯಕ್ರಮದಲ್ಲಿ ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷ ಮುತ್ತು ನಂದಿ, ಛಲವಾದಿ ಮಹಾಸಭಾದ ಜಿಲ್ಲಾ ಅಧ್ಯಕ್ಷ ಆನಂದ ಸಿಂಗಾಡಿ, ಮುಖಂಡರಾದ ಮುತ್ತು ಬಿಳೆಯಲಿ, ಕೆ.ಪಿ. ಪಾಟೀಲ, ಎಸ್.ಎಸ್. ಪಾಟೀಲ ಉಪಸ್ಥಿತರಿದ್ದರು.ಯುವಕ ಮಂಡಳದ ಅಧ್ಯಕ್ಷ ಆನಂದ ಎಸ್. ಛಲವಾದಿ, ಉಪಾಧ್ಯಕ್ಷ ಶರಣಪ್ಪ ಪಿ. ಛಲವಾದಿ, ಕಾರ್ಯದರ್ಶಿ ಮಂಜುನಾಥ ಅ. ಛಲವಾದಿ ಹಾಗೂ ಗ್ರಾಮದ ಹಿರಿಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

