ನರೇಗಲ್‌ನಲ್ಲಿ ಕಮಲ ಪಡೆ ಗುಡುಗು, ನಾರಿ ಶಕ್ತಿ ವಂದನಾ ವಿರೋಧಿಸುವ – ಕಾಂಗ್ರೆಸ್ಸಿಗರಿಗೆ ತಕ್ಕ ಪಾಠ ಖಚಿತ..!

ನರೇಗಲ್ ಏ.29

ಮಹಿಳೆಯರಿಗೆ ಸಂಸತ್ತು ಮತ್ತು ವಿಧಾನ ಸಭೆಗಳಲ್ಲಿ 33% ಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ಐತಿಹಾಸಿಕ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟದ ಸ್ತ್ರೀ ವಿರೋಧಿ ಧೋರಣೆಯನ್ನು ಖಂಡಿಸಿ, ಬಿಜೆಪಿ ಮಹಿಳಾ ಮೋರ್ಚಾ ರೋಣ ಮಂಡಲದ ವತಿಯಿಂದ ನರೇಗಲ್ ಪಟ್ಟಣದಲ್ಲಿ ಇಂದು ಬೃಹತ್ ಜನಾಕ್ರೋಶ ಪ್ರತಿಭಟನೆ ನಡೆಸಲಾಯಿತು.

ನರೇಗಲ್ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರದ ಮಹಿಳಾ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮೋರ್ಚಾ ರೋಣ ಮಂಡಲದ ಮಾಜಿ ಅಧ್ಯಕ್ಷರಾದ ಮುತ್ತಣ್ಣ ಕಡಗದ ಅವರು, ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರನ್ನು ದೇಶದ ನಿರ್ಧಾರ ತೆಗೆದು ಕೊಳ್ಳುವ ಶಕ್ತಿಯನ್ನಾಗಿ ಮಾಡಲು ಮೀಸಲಾತಿ ತರುತ್ತಿದ್ದರೆ, ಇತ್ತ ಕಾಂಗ್ರೆಸ್ ನಾಯಕರು ನಾರಿ ಶಕ್ತಿಯನ್ನು ಅವಮಾನಿಸುತ್ತಿದ್ದಾರೆ. ಕಾಂಗ್ರೆಸ್ಸಿಗರ ಮಹಿಳಾ ವಿರೋಧಿ ನೀತಿಯಿದೆ. ರಾಜಕೀಯ ಅಸ್ತಿತ್ವಕ್ಕಾಗಿ ಹೆಣ್ಣು ಮಕ್ಕಳ ಹಕ್ಕನ್ನು ಕಸಿದು ಕೊಳ್ಳಲು ಸಂಚು ರೂಪಿಸುತ್ತಿರುವ ಕಾಂಗ್ರೆಸ್‌ಗೆ ಮುಂಬರುವ ಚುನಾವಣೆಯಲ್ಲಿ ರಾಜ್ಯದ ಮಹಿಳಾ ಲೋಕ ಮಣ್ಣು ಮುಕ್ಕಿಸಲಿದೆ” ಎಂದು ಖಡಕ್ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಮುಖಂಡರಾದ ಅಶೋಕ್ ನವಲಗುಂದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರ ಸಬಲೀಕರಣ ಬೇಕಾಗಿಲ್ಲ, ಅವರಿಗೆ ಕೇವಲ ಅಧಿಕಾರವಷ್ಟೇ ಮುಖ್ಯ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಬಿಲ್‌ಗೆ ಬಿಜೆಪಿ ಜೀವ ನೀಡಿದರೆ, ಅದನ್ನು ಸಹಿಸಲಾಗದ ಕಾಂಗ್ರೆಸ್ ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ. ಮಹಿಳೆಯರ ಅಭಿವೃದ್ಧಿಗೆ ಕೊಳ್ಳಿ ಇಡುತ್ತಿರುವ ಕಾಂಗ್ರೆಸ್ಸಿಗರಿಗೆ ನಾರಿಯರೇ ಶಾಪವಾಗಲಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಮಹಿಳಾ ಮೋರ್ಚಾ ಅಧ್ಯಕ್ಷರಾದ ಇಂದಿರಾ ತೇಲಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರು ಕೇವಲ ಮತ ಬ್ಯಾಂಕ್ ಆಗಿ ಕಾಣುತ್ತಾರೆಯೇ ಹೊರತು, ಅವರಿಗೆ ಅಧಿಕಾರ ನೀಡಲು ಮನಸ್ಸಿಲ್ಲ. ಸನಾತನ ಸಂಸ್ಕೃತಿಯಲ್ಲಿ ಸ್ತ್ರೀಯನ್ನು ಶಕ್ತಿ ಎಂದು ಪೂಜಿಸಲಾಗುತ್ತದೆ, ಆದರೆ ಕಾಂಗ್ರೆಸ್ ನಾಯಕರು ಮಹಿಳೆಯರನ್ನು ಕೀಳಾಗಿ ಕಾಣುವ ಮೂಲಕ ತಮ್ಮ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ. ಈ ಹೋರಾಟ ಕೇವಲ ಇಂದಿಗೆ ಸೀಮಿತವಲ್ಲ, ಹಳ್ಳಿ ಹಳ್ಳಿಗೂ ಕಾಂಗ್ರೆಸ್‌ನ ಈ ದ್ರೋಹವನ್ನು ತಲುಪಿಸುತ್ತೇವೆ ಎಂದು ಗುಡುಗಿದರು.

ಈ ಸಂದರ್ಭದಲ್ಲಿ. ಬಸನಗೌಡ ಪೊಲೀಸ ಪಾಟೀಲ್, ಜ್ಯೋತಿ ಪಾಯಪ್ಪಗೌಡ್ರ, ಶಶಿದರ್ ಸಂಕನಗೌಡರ, ಅಕ್ಕಮ್ಮ ಮಣ್ಣೋಡ್ಡರ್, ಬಸಮ್ಮ ಧರ್ಮಯತ, ರಮೇಶ್ ವಕ್ಕರ್, ಹುಲ್ಲಪ್ಪ ಕೆಂಗಾರ್, ಯಲ್ಲಪ್ಪ ಮಣ್ಣೋಡ್ಡರ್, ಮಲ್ಲಿಕಾರ್ಜುನ್ ಬುಮನಗೌಡ್ರ, ಪುಟ್ಟಣ್ಣ ಹೊಸಮನಿ, ಪ್ರಕಾಶ್ ಹಕ್ಕಿ, ಲಲಿತಾ ಮಾರಣಬಸರಿ ಯುವ ಮೋರ್ಚಾದ ಪ್ರಮುಖ ಪದಾಧಿಕಾರಿಗಳು, ಪಕ್ಷದ ಹಿರಿಯ ಮುಖಂಡರು ಹಾಗೂ ನೂರಾರು ಸಂಖ್ಯೆಯ ತಾಯಂದಿರು, ಕಾರ್ಯಕರ್ತರು ಪಾಲ್ಗೊಂಡು ಪ್ರತಿಭಟನೆಯನ್ನು ಯಶಸ್ವಿ ಗೊಳಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button