ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಂಕೀರ್ಣದಲ್ಲಿ ಬುದ್ಧ ಪೂರ್ಣಿಮೆ ಆಚರಣೆ – ಜಗತ್ತಿಗೆ ಶಾಂತಿಯ ದಾರಿ ತೋರಿಸಿದ ಮಹಾತ್ಮನ ಸ್ಮರಣೆ.
ಜಕ್ಕಲಿ ಮೇ.01

ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಂಕೀರ್ಣದಲ್ಲಿ ಇಂದು ಬುದ್ಧ ಪೂರ್ಣಿಮೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜಿಎಂಪಿಎಸ್ ಬಾಲಕರ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಅಂದಪ್ಪ ರಾಮಪ್ಪ ಮಾದರ ಹಾಗೂ ಎಚ್‌ಪಿಕೆಜಿಎಸ್ ಹೆಣ್ಣು ಮಕ್ಕಳ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ವೀರಪ್ಪ ಮುಕ್ಕಣ್ಣವರ ಅವರು ಭಗವಾನ್ ಗೌತಮ ಬುದ್ಧರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಎಸ್.ಬಿ ಗವಿ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದು ಗೌರವ ಸಲ್ಲಿಸಿದರು.

ವೈಶಾಖ ಮಾಸದ ಪೂರ್ಣಿಮೆಯಂದು ಜನಿಸಿದ ಗೌತಮ ಬುದ್ಧರು ಶಾಂತಿ ಮತ್ತು ಅಹಿಂಸೆಯ ಹರಿಕಾರರು. ಕಪಿಲವಸ್ತುವಿನ ರಾಜಕುಮಾರನಾಗಿ ಜನಿಸಿದ ಸಿದ್ಧಾರ್ಥನು ಲೋಕದ ದುಃಖಕ್ಕೆ ಪರಿಹಾರ ಹುಡುಕಲು ರಾಜ್ಯಭಾರವನ್ನೇ ತ್ಯಜಿಸಿ ಮಹಾಭಿನಿಷ್ಕ್ರಮಣ ಮಾಡಿದರು. ಗಯೆಯ ನಿರಂಜನ ನದಿಯ ತೀರದಲ್ಲಿ ಅಶ್ವತ್ಥ ಮರದ ಕೆಳಗೆ ತಪಸ್ಸು ಮಾಡಿ ಜ್ಞಾನೋದಯ ಪಡೆದು ಬುದ್ಧರಾದರು. ಬುದ್ಧರು ಸಾರಿದ ನಾಲ್ಕು ಆರ್ಯ ಸತ್ಯಗಳು ಮತ್ತು ಅಷ್ಟಾಂಗ ಮಾರ್ಗಗಳು ಮನುಕುಲದ ಉದ್ದಾರಕ್ಕೆ ದಾರಿ ದೀಪವಾಗಿವೆ. ಆಸೆಗಳೇ ದುಃಖಕ್ಕೆ ಮೂಲ ಎಂಬ ಅವರ ಸಂದೇಶವು ಇಂದಿಗೂ ಪ್ರಸ್ತುತವಾಗಿದ್ದು, ಜಗತ್ತಿಗೆ ಯುದ್ಧಕ್ಕಿಂತ ಬುದ್ಧನ ಶಾಂತಿಯ ಮಾರ್ಗವೇ ಶ್ರೇಷ್ಠವಾದುದು ಎಂದು ಈ ಆಚರಣೆಯ ಮೂಲಕ ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರಾದ ಶ್ರೀಮತಿ ಎ.ಬಿ ಜಕ್ಕಲಿ, ಎಸ್.ಎ ಪಲ್ಲೇದ, ಎಸ್.ಎಸ್ ಯಲ್ಲರೆಡ್ಡಿ ಹಾಗೂ ಪಿ.ಜಿ ಹುಯಿಲಗೋಳ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

