ಕಾಯಕ ಮತ್ತು ದಾಸೋಹ ಪರಂಪರೆ ಇಂದಿಗೂ ಜೀವಂತ – ಡಾ, ಕೆ.ರವೀಂದ್ರನಾಥ್.
ಕೂಡ್ಲಿಗಿ ಜು.31

ಬಸವಾದಿ ಶರಣರು ಪ್ರತಿಪಾದಿಸಿದ “ಕಾಯಕವೇ ಕೈಲಾಸ” ಮತ್ತು “ದಾಸೋಹವೇ ಧರ್ಮ” ಎಂಬ ತತ್ವಗಳು ಇಂದಿಗೂ ಸಮಾಜಕ್ಕೆ ಮಾರ್ಗ ದರ್ಶಕವಾಗಿವೆ ಎಂದು ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ, ರವಿಂದ್ರನಾಥ್ ಹೇಳಿದರು.
ಕಾನಾ ಮಡಗು ಶರಣಬಸವೇಶ್ವರ ದಾಸೋಹ ಮಠದ ಆವರಣದಲ್ಲಿ ಆಯೋಜಿಸಿದ್ದ “ದಾಸೋಹ ಪೌರ್ಣಿಮೆ” ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರ ಕಾಯಕ ಮತ್ತು ದಾಸೋಹ ಪರಂಪರೆ ಕೇವಲ ಇತಿಹಾಸದ ಪುಟಗಳಿಗೆ ಸೀಮಿತವಾಗಿಲ್ಲ.
ಇಂದಿಗೂ ಅನೇಕ ಮಠಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಸಮಾಜ ಸೇವಾ ಸಂಘಟನೆಗಳು ಅನ್ನದಾಸೋಹ, ಶಿಕ್ಷಣ, ಆರೋಗ್ಯ ಸೇವೆ ಮತ್ತು ಮಾನವೀಯ ಕಾರ್ಯಗಳ ಮೂಲಕ ಈ ಪರಂಪರೆಯನ್ನು ಜೀವಂತವಾಗಿರಿಸಿ ಕೊಂಡಿವೆ ಎಂದು ತಿಳಿಸಿದರು.
ಶ್ರಮಕ್ಕೆ ಗೌರವ ನೀಡುವ ಮನೋಭಾವವೇ ಕಾಯಕದ ಸಾರವಾಗಿದ್ದು, ದುಡಿದು ಸಂಪಾದಿಸಿದ ಸಂಪತ್ತನ್ನು ಸಮಾಜದ ಒಳಿತಿಗಾಗಿ ಹಂಚಿ ಕೊಳ್ಳುವುದೇ ದಾಸೋಹದ ನಿಜವಾದ ಅರ್ಥವಾಗಿದೆ.
ಇಂದಿನ ಯುವ ಜನತೆ ಬಸವಣ್ಣನವರ ತತ್ವಗಳನ್ನು ಅಳವಡಿಸಿ ಕೊಂಡು ಪ್ರಾಮಾಣಿಕ ಶ್ರಮ, ಸಾಮಾಜಿಕ ಕಾಳಜಿ ಮತ್ತು ಸೇವಾ ಮನೋಭಾವವನ್ನು ಬೆಳೆಸಿ ಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸಮಾಜದಲ್ಲಿ ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಮಾನತೆ ಮತ್ತು ಸಹ ಬಾಳ್ವೆಯನ್ನು ಬೆಳೆಸುವ ಶಕ್ತಿಯು ಬಸವ ತತ್ವಗಳಲ್ಲಿದೆ. ಕಾಯಕ ಮತ್ತು ದಾಸೋಹ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ ಆರೋಗ್ಯಕರ, ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಈ ಕಾರ್ಯಕ್ರಮ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎನ್.ಎಂ ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು.
ದಾಸೋಹ ಪೌರ್ಣಿಮೆ ಕಾರ್ಯಕ್ರಮವನ್ನು ಷ.ಬ್ರ. ಯೋಗಿರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಪಾದಪೂಜೆ ಮಾಡುವುದರ ಮುಖಾಂತರ ದಾಸೋಹ ಪೂರ್ಣಿಮೆ ಕಾರ್ಯಕ್ರಮಕ್ಕೆ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾ.ಮ ಐಮಡಿ ಶರಣಾರ್ಯರು ಧರ್ಮಾಧಿಕಾರಿಗಳು ವಹಿಸಿ ಕೊಂಡಿದ್ದರು.
ಹಗರಿಬೊಮ್ಮನಹಳ್ಳಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಎಂಪಿಎಂ ಮಂಜುನಾಥ್ ಕಾರ್ಯಕ್ರಮದ ಕುರಿತು ಮಾತನಾಡಿದರು
ಇದೇ ಸಂದರ್ಭದಲ್ಲಿ ನೀರಗಂಟಿ ಶರಣಪ್ಪ, ಚನ್ನವೀರ ಸ್ವಾಮಿ, ಎಚ್ಎಂಬಿ ಗುರುಮೂರ್ತಿ, ಕೆ ಸುಭಾಷ್ ಚಂದ್ರ, ಆಲೂರು ಮಲ್ಲಿಕಾರ್ಜುನ, ಸುರೇಶ್, ಸೋಮಶೇಖರಪ್ಪ, ತಿಪ್ಪೇಸ್ವಾಮಿ, ಸೇರಿದಂತೆ, ಶರಣ ಸಾಹಿತ್ಯಾಸಕ್ತರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ತಳವಾರ್ ಶರಣಪ್ಪ, ಸ್ವಾಗತಿಸಿದರು. ದಿವಾಕರ್ ನಾರಾಯಣ ಕಾರ್ಯಕ್ರಮದ ನಿರೂಪಿಸಿದರು. ನುಂಕೇಶ್ ಓಬಶೆಟ್ಟಿಹಳ್ಳಿ ತಂಡ ವಚನ ಗಾಯನ ಕಾರ್ಯಕ್ರಮ ನೆರವೇರಿಸಿದರು.
ಹೋಬಳಿ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

