ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ದಲಿತರ ಸಬಲೀಕರಣ, ವಿಚಾರ ಸಂಕಿರಣ ಹಾಗೂ – ದಲಿತ ಜಾಗೃತಿ ಸಮಾವೇಶ ಯಶಸ್ವಿಯಾಗಿ ಜರುಗಿತು.
ಗದಗ:ಆ. 09


ಪಂಚಾಯತ್ ರಾಜ್ ಆಡಳಿತವು ಸರ್ವ ಜನಾಂಗವನ್ನೊಳ ಗೊಂಡ ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಂಸ್ಥೆಯಾಗಿದ್ದು, ಪಂಚಾಯತ್ ರಾಜ್ ಆಡಳಿತವು ಸಾಮಾಜಿಕ ಸಮಾನತೆಯ ಬಾಗಿಲು ಇದ್ದಂತೆ ಎಂದು ರಾಜ್ಯ ಗ್ರಾಮೀಣ ಪಂಚಾಯತ್ ಸದಸ್ಯರ ಒಕ್ಕೂಟದ ಅಧ್ಯಕ್ಷರಾದ ಕೆ.ಸತೀಶ ಅವರು ಪ್ರತಿಪಾದಿಸಿದರು.
ಗದಗ ನಗರದ ಡಾ, ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದ.ಸಂ.ಸ.) ಗದಗ ತಾಲೂಕು ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ದಲಿತರ ಸಬಲೀಕರಣದ ಆಯಾಮಗಳು ಕುರಿತ ವಿಚಾರ ಸಂಕಿರಣ, ಸಾಧಕರಿಗೆ ಸನ್ಮಾನ ಹಾಗೂ ದಲಿತ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ಪ್ರತಿಯೊಬ್ಬ ವ್ಯಕ್ತಿಗೆ ಸಮಾನತೆಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲತೆಯನ್ನು ಒದಗಿಸುವ ಮುಖ್ಯ ಮಾರ್ಗವಾಗಿದೆ. ದಲಿತರ ನೈಜ ಅಭಿವೃದ್ಧಿಗೆ ಪಂಚಾಯತ್ ಮಟ್ಟದಲ್ಲಿ ಎಸ್‌ಸಿ/ಎಸ್‌ಟಿ (SC/ST) ಗ್ರಾಮ ಸಭೆಗಳನ್ನು ತಪ್ಪದೇ ಆಯೋಜಿಸುವುದು ಅತ್ಯಗತ್ಯ. ಶೋಷಿತ ಜನಾಂಗವು ಕೀಳರಿಮೆ ಯಿಂದ ಹೊರ ಬಂದು ಸಮಾಜದ ಮುಖ್ಯ ವಾಹಿನಿಯಲ್ಲಿ ಪಾಲ್ಗೊಂಡಾಗ ಮಾತ್ರವೇ ನೈಜ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಎಫ್.ಎಚ್ ಜಕ್ಕಪ್ಪನವರ ಅವರು ಶೋಷಿತ ಸಮುದಾಯದ ನಿಜವಾದ ವಿಮೋಚನೆ ಶಿಕ್ಷಣದಲ್ಲಿದೆ. ಪ್ರತಿಯೊಬ್ಬ ಶೋಷಿತ ವ್ಯಕ್ತಿಯೂ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಆಗ ಮಾತ್ರ ಶೋಷಣೆ ರಹಿತ ಸಮಾಜವನ್ನು ಕಟ್ಟಲು ಸಾಧ್ಯ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವ ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಪಡೆದು ಕೊಂಡು, ಕೇವಲ ಫಲಾನುಭವಿಗಳಾಗದೆ ಯೋಜನಾ ಪಾಲುದಾರ ರಾಗಬೇಕು. ಆರ್ಥಿಕ ಭದ್ರತೆ ಹಾಗೂ ಸ್ವಾವಲಂಬಿ ಜೀವನಕ್ಕೆ ಪೂರಕವಾದ ಯೋಜನೆಗಳತ್ತ ಗಮನ ಹರಿಸಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದಿವ್ಯ ಸನ್ನಿಧಿ ವಹಿಸಿ, ಜ್ಯೋತಿ ಬೆಳಗಿಸಿ ಮಾತನಾಡಿದ ರಾಜ್ಯ ಸಂಚಾಲಕರಾದ ಎಮ್. ಗುರುಮೂರ್ತಿ ಶಿವಮೊಗ್ಗ ಅವರು, ದಲಿತ ಚಳವಳಿಯ ಹೋರಾಟದ ಫಲವಾಗಿ ಇಂದು ರಾಜ್ಯದ ಶೋಷಿತ ಜನಾಂಗಕ್ಕೆ ಮನೆ ನಿರ್ಮಾಣ ಮಾಡಿ ಕೊಳ್ಳಲು ಸರ್ಕಾರ ನೀಡುತ್ತಿದ್ದ ಅನುದಾನವನ್ನು ₹1.20 ಲಕ್ಷದಿಂದ ₹3.00 ಲಕ್ಷದ ವರೆಗೆ ಹೆಚ್ಚಿಸಿ ಮಂಜೂರು ಮಾಡಿರುವುದನ್ನು ನಾವು ಸ್ಮರಿಸಬೇಕು. ದ.ಸಂ.ಸ ಸ್ಥಾಪಕರಾದ ಪ್ರೊ, ಬಿ.ಕೃಷ್ಣಪ್ಪ ನವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಹಾಗೂ ಅವರ ಜನ್ಮ ದಿನವಾದ ಜೂನ್ 9 ರಂದು ಸರ್ಕಾರಿ ರಜೆ ರಹಿತ ಜಯಂತಿ’ ಯಾಗಿ ಆಚರಿಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಸಂಘಟನಾ ಸಂಚಾಲಕರಾದ ಹೆಚ್.ಎಸ್ ಬಳ್ಳಾರಿ ಅವರು ಸಮಾವೇಶದಲ್ಲಿ ಪ್ರಮುಖ ಹಕ್ಕುತ್ತಾಯಗಳನ್ನು SC/ST SCP/TSP ಕಾಯ್ದೆ ಪ.ಜಾತಿ ಹಾಗೂ ಪ.ಪಂಗಡದ SCP/TSP ಅನುದಾನದ ದುರ್ಬಳಕೆ ತಡೆಯಲು ತಂದಿರುವ ಸೆಕ್ಷನ್ 7D ರದ್ದು ಪಡಿಸಿರುವುದನ್ನು ಹಿಂಪಡೆದು, ಕಟ್ಟುನಿಟ್ಟಾಗಿ ಜಾರಿಗೊಳಿಸ ಬೇಕು.
ಗದಗ-ಬೆಟಗೇರಿ ನಗರದ ಪ್ರಮುಖ ರಸ್ತೆ ಅಥವಾ ವೃತ್ತಕ್ಕೆ ಪ್ರೊ, ಬಿ.ಕೃಷ್ಣಪ್ಪ ನವರ ಹೆಸರನ್ನು ನಾಮಕರಣ ಮಾಡಬೇಕು. ವಿಧವಾ ವೇತನ, ದೇವದಾಸಿ ವೇತನ, ವಿಕಲ ಚೇತನ ಹಾಗೂ ಸಂಧ್ಯಾ ಸುರಕ್ಷಾ ಪಿಂಚಣಿಯನ್ನು ₹3,000 ಕ್ಕೆ ಹೆಚ್ಚಿಸ ಬೇಕು.

ಭೂ ರಹಿತ ದೇವದಾಸಿ ಹಾಗೂ ವಿಧವಾ ಮಹಿಳೆಯರಿಗೆ ಕನಿಷ್ಠ 2 ಎಕರೆ ಜಮೀನು ಮಂಜೂರು ಮಾಡಬೇಕು. ಗದಗ ತಾಲೂಕಿನಲ್ಲಿ ನಿವೇಶನ ರಹಿತ ಹಾಗೂ ವಸತಿ ರಹಿತ ಕುಟುಂಬಗಳ ಸಮೀಕ್ಷೆ ನಡೆಸಿ ನಿವೇಶನ ಹಂಚ ಬೇಕು. ಬೆಲೆ ಏರಿಕೆಗೆ ತಕ್ಕಂತೆ ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಯೋಜನಾ ವೆಚ್ಚವನ್ನು ₹3,000 ಕ್ಕೆ ಏರಿಸಬೇಕು.
ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಹಾಗೂ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಖಾಯಂ ಗೊಳಿಸ ಬೇಕು. ಕಿಟಗೇರಿ, ಎಲಿಶಿರೂರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ದಲಿತರಿಗೆ ಸ್ಮಶಾನಕ್ಕಾಗಿ ಹಾಗೂ ನಿವೇಶನಕ್ಕಾಗಿ ಭೂಮಿ ಮಂಜೂರು ಮಾಡಬೇಕು.
ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಉಪಸ್ಥಿತಿ ಹಾಗೂ ಕಾರ್ಯಕ್ರಮ ನಿರ್ವಹಣೆ ಜಿಲ್ಲಾ ಸಂಘಟನಾ ಸಂಚಾಲಕ ಸತೀಶ ಹುಲಿ ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸಂಚಾಲಕ ವಿನಾಯಕ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ, ಜಿ.ಪಂ. ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಂದಾ ಹಣಬರಟ್ಟಿ, ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಹೆಚ್.ಎಸ್ ಜನಗಿ, ರಾಜ್ಯ ವಿಭಾಗೀಯ ಸಂಚಾಲಕರಾದ ಪ್ರಕಾಶ್ ಹೊಸಲ್ಲೆ, ಶರಣು ಪೂಜಾರ, ದುರಗಪ್ಪ ಎಲ್.ಹೆಚ್. ವೀರಪ್ಪ ಕೋಟಿ, ಕೆಂಚಪ್ಪ ಹಾಡಿಮನಿ, ಮಂಜು ಬುರಡಿ, ಸಂಗಪ್ಪ ಹೊಸಮನಿ, ಅನಿಲ ಸಿದ್ಧಮ್ಮನಹಳ್ಳಿ, ಶ್ರೀಮತಿ ಸುಶೀಲಾ ಚಲವಾದಿ, ಚಂದ್ರು ಮೇಲಿನಮನಿ, ಪರಶುರಾಮ ಪೂಜಾರ, ಭಾಷಾಸಾಬ ಮಲ್ಲಸಮುದ್ರ, ಆನಂದ ಸಿಂಗಾದಿ, ಕೃಷ್ಣಾ ಪೂಜಾರ, ಸೋಮು ನಾಗರಾಜ, ದತ್ತು ಜೋಗಣ್ಣವರ, ನಾಗರಾಜ ನಡುವಿನಕೇರಿ, ಗುರುನಾಥ ಕಂಗಾರಕರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಶರೀಫ ಬಿಳಿಯಲಿ ಮತ್ತು ಬಿಳಿಯಲಿ ಕ್ರಾಂತಿಗೀತೆ ಹಾಡಿದರು. ಬಸವರಾಜ ಕಡೇಮನಿ ಸ್ವಾಗತಿಸಿದರು, ಮುತ್ತು ಪೂಜಾರ ಕಾರ್ಯಕ್ರಮ ನಿರೂಪಿಸಿದರು ಹಾಗೂ ನಾಗರಾಜ ಗುಪ್ತಿ ವಂದನಾರ್ಪಣೆ ಮಾಡಿದರು.
