ಶ್ರೀ ಕೆ.ಹೆಚ್ ಮುನಿಯಪ್ಪ ಅವರ ವಿರುದ್ಧದ ರಾಜಕೀಯ ವಿದ್ಯಮಾನಗಳಿಗೆ – ವೈ.ಸಿ ಕಾಂಬಳೆ ತೀವ್ರ ಆಕ್ರೋಶ.
ಬಾಗಲಕೋಟ ಆ.09


ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ, ಏಳು ಬಾರಿ ಲೋಕಸಭಾ ಸದಸ್ಯರು, ಎರಡು ಬಾರಿ ಕೇಂದ್ರ ಸಚಿವರು ಹಾಗೂ ಪ್ರಸ್ತುತ ರಾಜ್ಯ ಸಂಪುಟ ಸಚಿವರಾಗಿರುವ ಶ್ರೀ ಕೆ.ಹೆಚ್ ಮುನಿಯಪ್ಪ ರವರ ಕುರಿತು ಇತ್ತೀಚಿಗೆ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಸಿ ಕಾಂಬಳೆ ತೀವ್ರ ಆತಂಕ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀ ಕೆ.ಹೆಚ್ ಮುನಿಯಪ್ಪ ಅವರು ಎಡಗೈ (ಮಾದಿಗ) ಸಮುದಾಯದ ಅತ್ಯಂತ ಹಿರಿಯ ಹಾಗೂ ಅನುಭವಿ ನಾಯಕರಾಗಿದ್ದು, ಐದು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಅವರ ರಾಜಕೀಯ ಅನುಭವ, ಸಾಮಾಜಿಕ ಬದ್ಧತೆ ಹಾಗೂ ಪಕ್ಷದ ಮೇಲಿನ ನಿಷ್ಠೆ ಅಪರೂಪವಾದದ್ದು. ಸರ್ಕಾರದ ಮೊದಲ ಅವಧಿಯಲ್ಲಿ ಅವರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ನೀಡಲಾಗಿತ್ತು. ಎರಡನೇ ಅವಧಿಯಲ್ಲಿಯೂ ಅದೇ ಇಲಾಖೆಯನ್ನು ಮುಂದುವರಿಸಲಾಗಿದೆ.
ಕರ್ನಾಟಕದಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ಎಡಗೈ (ಮಾದಿಗ) ಸಮುದಾಯದ ಬಹು ಕಾಲದ ಬೇಡಿಕೆಯೆಂದರೆ ಶ್ರೀ ಕೆ.ಹೆಚ್ ಮುನಿಯಪ್ಪ ರವರಿಗೆ ಉಪ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಸಮಾಜ ಕಲ್ಯಾಣ ಇಲಾಖೆಯನ್ನು ನೀಡಬೇಕು ಎಂಬುದಾಗಿದೆ. ಆದರೆ ಈ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ಇದು ವರೆಗೂ ಪರಿಗಣಿಸಿಲ್ಲ.
ಇತ್ತೀಚಿನ ಸಚಿವ ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ಶ್ರೀ ಕೆ.ಹೆಚ್ ಮುನಿಯಪ್ಪ ಅವರು ಸಚಿವ ಸ್ಥಾನದಿಂದ ಹೊರಬರ ಬೇಕಾಗುತ್ತದೆ ಎಂಬ ರೀತಿಯಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ . ಮಹಿಳಾ ಕೋಟಾ ಅಥವಾ ಇತರ ಯಾವುದೇ ಕಾರಣಗಳನ್ನು ಮುಂದಿಟ್ಟು ಇಂತಹ ನಿರ್ಧಾರವನ್ನು ಸಮರ್ಥಿಸುವುದು ಸೂಕ್ತವಲ್ಲ.
ಶ್ರೀ ಕೆ.ಹೆಚ್ ಮುನಿಯಪ್ಪ ರಂತಹ ಹಿರಿಯ ನಾಯಕರ ಅನುಭವ ಮತ್ತು ಕೊಡುಗೆಯನ್ನು ಕಡೆಗಣಿಸುವುದು ಎಡಗೈ ಮಾದಿಗ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ.
ಕಾಂಗ್ರೇಸ್ ಪಕ್ಷದಲ್ಲಿ ಅನೇಕರ ಕುಟುಂಬಗಳಲ್ಲಿ ಇಬ್ಬರು ಮೂರು ಜನ ಗೆದ್ದು ಅಧಿಕಾರದಲ್ಲಿದ್ದಾರೆ. ಆದರೆ ಅವರಿಗಿಲ್ಲದ ನಿಯಮಗಳು ಶೋಷಿತ ಸಮುದಾಯದ ಹಿರಿಯ ರಾಜಕಾರಣಿ ಶ್ರೀ ಕೆ.ಹೆಚ್ ಮುನಿಯಪ್ಪ ರವರಿಗೆ ಯಾಕೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಇದು ಸರಿಯಲ್ಲ ಮಾದಿಗ ಸಮುದಾಯದ ಹಿರಿಯ ನಾಯಕರಿಗೆ ಈ ರೀತಿ ಅವಮಾನ ಮಾಡುತ್ತಿರುವುದನ್ನು ಸಮುದಾಯ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಶ್ರೀ ಕೆ.ಹೆಚ್ ಮುನಿಯಪ್ಪ ಅವರು ಎಡಗೈ ಸಮುದಾಯದ ಆಶಾಕಿರಣ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಾಮಾಜಿಕ ನ್ಯಾಯದ ಧ್ವನಿ ಯಾಗಿದ್ದಾರೆ. ಅವರ ಅನುಭವ ಮತ್ತು ನಾಯಕತ್ವ ರಾಜ್ಯಕ್ಕೂ ಹಾಗೂ ಸಮುದಾಯಕ್ಕೂ ಅಗತ್ಯವಾಗಿದೆ.
ಪರಿಶಿಷ್ಟ ಜಾತಿಯಲ್ಲಿ ಬಹು ಸಂಖ್ಯಾತರಾಗಿರುವ ಎಡಗೈ ಮಾದಿಗ ಸಮುದಾಯ ಮುನಿದರೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬಹಳ ನಷ್ಟವಾಗಲಿದೆ.
ನಮ್ಮ ಆಗ್ರಹಗಳು:-
1. ಶ್ರೀ ಕೆ.ಹೆಚ್ ಮುನಿಯಪ್ಪ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸ ಬೇಕು.
2. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಬದಲಿಗೆ ಸಮಾಜ ಕಲ್ಯಾಣ ಇಲಾಖೆಯನ್ನು ನೀಡಬೇಕು.
3. ಎಡಗೈ (ಮಾದಿಗ) ಸಮುದಾಯಕ್ಕೆ ನ್ಯಾಯ ಸಮ್ಮತ ಹಾಗೂ ಗೌರವಯುತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು.
4. ಶ್ರೀ ಕೆ.ಹೆಚ್ ಮುನಿಯಪ್ಪ ಅವರ ರಾಜಕೀಯ ಗೌರವಕ್ಕೆ ಧಕ್ಕೆಯಾಗುವ ಯಾವುದೇ ಕ್ರಮವನ್ನು ಕೈಗೊಳ್ಳ ಬಾರದು.
ರಾಜ್ಯದ ಹಿತ, ಕಾಂಗ್ರೆಸ್ ಪಕ್ಷದ ಹಿತ ಹಾಗೂ ಎಡಗೈ ಮಾದಿಗ, ಸಮಗಾರ, ಮೋಚಿ, ಡೋಹರ ಸಮುದಾಯಗಳ ಆಶಯಗಳನ್ನು ಗೌರವಿಸುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಹೈಕಮಾಂಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶ್ರೀ ಕೆ.ಹೆಚ್ ಮುನಿಯಪ್ಪ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸಿ, ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ವಹಿಸುವ ಮೂಲಕ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಸಿ ಕಾಂಬಳೆ ಬಲವಾಗಿ ಆಗ್ರಹಿಸಿದ್ದಾರೆ.

