ಮಳೆ ಕೈಕೊಟ್ಟ ಪರಿಣಾಮ ಬೆಳೆಗಳಿಗೆ ಸಂಕಷ್ಟ, ಪೋತ್ನಾಳ ಕೊಟ್ನೆಕಲ್‌ನಲ್ಲಿ – ಸಚಿವರ ಪರಿಶೀಲನೆ.

ಮಾನ್ವಿ ಆ.09

ತಾಲ್ಲೂಕಿನ ಪೋತ್ನಾಳ ಹಾಗೂ ಕೊಟ್ನೆಕಲ್ ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಅಜಯ್ ಸಿಂಗ್ ಅವರು ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಹಾಗೂ ಮಾನ್ವಿ ಶಾಸಕ ಹಂಪಯ್ಯ ನಾಯಕ ಅವರೊಂದಿಗೆ ಪರಿಶೀಲಿಸಿದರು. ಈ ವೇಳೆ ಹೊಲಗಳಿಗೆ ತೆರಳಿ ಬೆಳೆಗಳ ಸ್ಥಿತಿಗತಿಯನ್ನು ವೀಕ್ಷಿಸಿ ರೈತರೊಂದಿಗೆ ಸಮಾಲೋಚನೆ ನಡೆಸಿದರು.

ಮಳೆ ಕೊರತೆಯಿಂದ ಹತ್ತಿ ಹಾಗೂ ಸೂರ್ಯಕಾಂತಿ ಬೆಳೆಗಳ ಮೇಲೆ ಉಂಟಾಗಿರುವ ಪರಿಣಾಮವನ್ನು ಸಚಿವರು ಸ್ಥಳದಲ್ಲೇ ಪರಿಶೀಲಿಸಿದರು. ಬೆಳೆಗಳ ಪ್ರಸ್ತುತ ಸ್ಥಿತಿ, ಮಳೆಯ ಪ್ರಮಾಣ, ಮಣ್ಣಿನ ತೇವಾಂಶದ ಕೊರತೆ ಹಾಗೂ ಬೆಳೆ ನಿರ್ವಹಣೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ರೈತರಿಂದ ಮಾಹಿತಿ ಪಡೆದುಕೊಂಡರು.

ಮಳೆ ಕೈ ಕೊಟ್ಟಿರುವುದರಿಂದ ಬೆಳೆಗಳ ಇಳುವರಿ ಕುಂಠಿತ ವಾಗುವ ಆತಂಕ ಎದುರಾಗಿದೆ. ಕೃಷಿ ಚಟುವಟಿಕೆಗಳಿಗೆ ಮಾಡಿರುವ ವೆಚ್ಚವೂ ವಾಪಸ್ ಬಾರದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು ಎಂದು ರೈತರು ಸಚಿವರ ಬಳಿ ಮನವಿ ಮಾಡಿದರು.

ರೈತರ ಸಮಸ್ಯೆಗಳನ್ನು ಆಲಿಸಿದ ಸಚಿವ ಅಜಯ್ ಸಿಂಗ್ ಅವರು, ಬರ ಪರಿಸ್ಥಿತಿಯಿಂದ ರೈತರಿಗೆ ಉಂಟಾಗಿರುವ ನಷ್ಟದ ಕುರಿತು ಸಮಗ್ರ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಸಮಗ್ರ ವರದಿ ಸಿದ್ಧಪಡಿಸ ಬೇಕು ಎಂದು ಸೂಚಿಸಿದರು.

ಅರ್ಹ ರೈತರಿಗೆ ಸರ್ಕಾರದ ನಿಯಮಾನುಸಾರ ಪರಿಹಾರ ಹಾಗೂ ಅಗತ್ಯ ನೆರವು ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಬರ ಪರಿಸ್ಥಿತಿಯ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು, ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಅಜಯ್ ಸಿಂಗ್ ರೈತರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಸ್ಕಿ ಶಾಸಕ ಬಸನಗೌಡ ತುರವಿಹಾಳ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಕೆ. ಶಾಂತಪ್ಪ, ಶರಣಯ್ಯ ನಾಯಕ, ಅಬ್ದುಲ್‌ಗಫೂರ್ ಸಾಬ್, ಖಾಲಿದ್ ಗುರು, ಪಂಪನಗೌಡ, ಅಮರೆಗೌಡ ಹಂಚಿನಾಳ, ಜಿ. ಶಿವಮೂರ್ತಿ, ಡಾ, ಶರ್ಮಾ, ಎಡಿಸಿ, ಎಸಿ, ತಹಶೀಲ್ದಾರ್, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button