ವಿದ್ಯಾರ್ಥಿಗಳೇ..ನಿಮ್ಮ ಬೇಸಿಗೆ ರಜೆ ಹೀಗಿರಲಿ

ಮಕ್ಕಳು ಎಂದರೆ ಮನೆಯ ಆಸ್ತಿ, ಮಕ್ಕಳು ಅಂದ್ರೆ ಮನೆಯ ಅಚ್ಚುಮೆಚ್ಚು, ಮಕ್ಕಳು ಅಂದರೆ ಮನೆಯ ದೇವರು ಇದ್ದಹಾಗೆ. ಜೂನ್ ಇಂದ ಪ್ರಾರಂಭವಾದ ಶಾಲೆ ಮಾರ್ಚ್ ವರೆಗೂ ಇರುತ್ತದೆ. ಈ ದಿನಗಳಲ್ಲಿ ವಿದ್ಯಾರ್ಥಿಗಳು ಬರೀ ಶಾಲೆ,ಪರೀಕ್ಷೆ ಇದೇ ಅವರ ಜೀವನವಾಗುತ್ತದೆ. ಬೇಸಿಗೆ ರಜೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿಯ ಸಂಭ್ರಮ. ಕೆಲವರಿಗೆ ಬೇಸಿಗೆ ರಜೆ ಎಂದರೆ ನೆನಪಾಗುವುದು ಅಜ್ಜಿಯ ಹಳ್ಳಿಯ ಮನೆ. ಆ ಹಳ್ಳಿಯಲ್ಲಿರುವ ತೋಟ,ಗದ್ದೆ ಹಾಗೂ ಬೆಟ್ಟಗುಡ್ಡದ ಸಮೃದ್ಧ ಪರಿಸರ ಇತ್ಯಾದಿಗಳು ಪಟ್ಟಣದಲ್ಲಿ ಓದುತ್ತಿರುವ ಮಕ್ಕಳಿಗೆ ಬಹಳ ಅಚ್ಚು ಮೆಚ್ಚು. ಪ್ರತಿಯೊಬ್ಬ ತಂದೆ ತಾಯಿಗಳಿಗೂ ಬೇಸಿಗೆ ರಜೆ ಒಂದು ರೀತಿ ಕಿರಿಕಿರಿ ಕಾರಣ ಮಕ್ಕಳು ಮನೆಯಲ್ಲಿದ್ದರೆ ಅವರ ಕಷ್ಟ ಸಹಿಸಿಕೊಳ್ಳಲಾಗುವುದಿಲ್ಲ. ಹಾಗಾಗಿಯೇ ಕೆಲವು ತಂದೆ ತಾಯಿಗಳು ಮಕ್ಕಳನ್ನ ಮತ್ತೆ ಬೇಸಿಗೆ ಶಿಬಿರಗಳಿಗೆ ಸೇರಿಸುವುದು.
ಬೇಸಿಗೆ ರಜೆ ಎಂದರೆ ಮಕ್ಕಳಿಗೆ ಈ ರೀತಿಯಾದರೆ ಬಹಳ ಉಪಯುಕ್ತವಾಗಿರುತ್ತದೆ ಎಂಬುದು ನನ್ನ ಅನಿಸಿಕೆ …

- ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ವ್ಯಾಯಾಮ,ಧ್ಯಾನ ನಿಯಮಿತವಾಗಿ ಕಲಿಸಬೇಕು.
- ಮಕ್ಕಳನ್ನ ವಿಶೇಷ ರೀತಿಯ ಕರಾಟೆ ಶಾಲೆಗಳಿಗೆ ಸೇರಿಸಬೇಕು.
- ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ ಚಿಂತನೆಗಳನ್ನ ಹೆಚ್ಚಿಸುವ ಸಹಜ ಸ್ಥಿತಿ ಯೋಗ ಶಿಬಿರಗಳಿಗೆ ಸೇರಿಸಬೇಕು.
- ಆದಷ್ಟು ಬೇಸಿಗೆ ರಜೆಯನ್ನು ಮಕ್ಕಳು ಹಳ್ಳಿಯ ವಾತಾವರಣದಲ್ಲಿ ಹಳ್ಳಿಯ ಹೊಲ,ಗದ್ದೆ ಹಾಗೂ ತೋಟಗಳಲ್ಲಿ ಕಳೆದರೆ ಅವರಿಗೆ ಪ್ರಕೃತಿಯ ಮೇಲಿನ ಪ್ರೀತಿಯ ಜೊತೆಗೆ ಕೃಷಿಯ ಬಗ್ಗೆ ಕಳಕಳಿಯೂ ಕೂಡ ಹೆಚ್ಚಾಗಬಹುದು.
- ಬೇಸಿಗೆ ರಜೆಯಲ್ಲಿ ಮಕ್ಕಳು ಅನಾಥಾಶ್ರಮಗಳಿಗೆ ವೃದ್ಧಾಶ್ರಮಗಳಿಗೆ ಹೋಗಿ ಅಲ್ಲಿಯ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತಿರಬೇಕು.
- ಆದಷ್ಟು ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಗಿಡಮರಗಳಿಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಕಟ್ಟಿ ಹಾಕಿ ಅದರಲ್ಲಿ ನೀರನ್ನು ಹಾಕುವುದರಿಂದ ಪಕ್ಷಿಗಳ ದಾಹ ತೀರಿಸಬಹುದು.
- ಸಾಧ್ಯವಾದಷ್ಟು ಶಾಲಾ ಮೈದಾನಗಳಲ್ಲಿ,ಹೊಲಗಳಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಟ್ಟು ಅವುಗಳಿಗೆ ನೀರನ್ನು ಹಾಕಿ ಪೋಷಿಸುವ ಕಾರ್ಯ ಮಾಡುವಂತಿರಬೇಕು.
- ಪ್ರಾಣಿ ಪಕ್ಷಿಗಳಿಗೆ ಅಲ್ಲಲ್ಲಿ ಸ್ವಲ್ಪ ಆಹಾರ,ಕಾಳು ಮತ್ತು ದವಸಗಳನ್ನು ಹಾಕಿ ಪ್ರಾಣಿ ಪಕ್ಷಿಗಳ ಪೋಷಣೆಯು ಕೂಡ ಮಾಡಬೇಕು.
- ದೇವಸ್ಥಾನಗಳಿಗೆ ಧಾರ್ಮಿಕ ಶಿಬಿರಗಳಿಗೆ ಭೇಟಿ ನೀಡಿ ದಾರ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು.
- ನಮ್ಮ ನಮ್ಮ ಸಂಬಂಧಿಕರ ಜೊತೆಗೆ ಮಕ್ಕಳನ್ನು ಬಿಡುವುದರಿಂದ ಅವರಲ್ಲಿರುವ ಒಳ್ಳೆಯ ಅಂಶಗಳು ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಆಗಬಹುದು.
- ಬೇಸಿಗೆ ರಜೆಯನ್ನು ಮಕ್ಕಳು ನಾಟಕ,ಕಲೆ,ಸಾಹಿತ್ಯ ಹಾಗೂ ಸಿನಿಮಾ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಅವುಗಳ ಮೇಲೆ ಸ್ವಲ್ಪ ಪ್ರಭಾವ ಬೀರುವಂತಿರಬೇಕು.
- ಶಾಲೆಯಲ್ಲಿ ಕೊಟ್ಟಿರುವ ಮನೆಗೆಲಸವನ್ನು ಮಕ್ಕಳು ಕಡ್ಡಾಯವಾಗಿ ಮಾಡುವಂತೆ ಪಾಲಕರು ನಿಗಾ ವಹಿಸಬೇಕು.
- ಹತ್ತಿರದಲ್ಲಿರುವ ವನ್ಯಜೀವಿಧಾಮಗಳು, ರಾಷ್ಟ್ರೀಯ ಸ್ಮಾರಕಗಳು, ಹಾಗೂ ಪ್ರೇಕ್ಷಣಿಕೆಯ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ಒಟ್ಟಿನಲ್ಲಿ ಬೇಸಿಗೆ ರಜೆಯನ್ನು ಮಕ್ಕಳು ಮನರಂಜನೆಯ ಜೊತೆಗೆ ಕಳೆಯುವುದರಿಂದ ಮುಂದಿನ ಶೈಕ್ಷಣಿಕ ಮಟ್ಟ ಉನ್ನತವಾಗಿರುತ್ತದೆ. ಆದಷ್ಟು ಪಾಲಕ ಪೋಷಕರು ಮಕ್ಕಳನ್ನ ಬಂಧನದಲ್ಲಿಡುವದನ್ನು ಬಿಟ್ಟು ಅವರನ್ನು ಸ್ವತಂತ್ರವಾಗಿ ಬಿಡಬೇಕು. ಆಯಾ ಮಕ್ಕಳ ಕಲೆಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
- ರಚನೆ:ಮುತ್ತು.ಯ.ವಡ್ಡರ ಬಾಗಲಕೋಟ