ಸಿರಿತನ ಕಾಣದ ಬಡವರು…

ಹಗಲಿರುಳೆನ್ನದೆ ದುಡಿಯುವ ಶ್ರಮಿಕರು
ನಾಡ ಸ್ವಚ್ಛತೆಗಾಗಿ ನಿಂತ ಕಾರ್ಮಿಕರು
ಬದುಕಿನಲಿ ಸಿರಿತನ ಕಾಣದ ಬಡವರು
ನೊಂದು ಬಿಂದು ಕಾಯಕದಲ್ಲಿ ಸದಾ ನಿರತರಾದವರು..
ದಿನದ 24 ಗಂಟೆ ಕಾಯಕದಲ್ಲಿ ತೊಡಗಿಕೊಂಡು
ನಗರ ಸ್ವಚ್ಛವಾಗಿಟ್ಟರು ತಾವು ಗಲೀಜುಗೊಂಡು
ಕಸವ ತೆಗೆದರು ಬಾಳಿನ ಬುತ್ತಿ ಹೊತ್ತುಕೊಂಡು
ಮೈ ಬಗ್ಗಿಸಿ ದುಡಿದರು ಕಡಿಮೆ ಸಂಬಳ ತೆಗೆದುಕೊಂಡು..
ಸುಖ ಅನುಭವಿಸಲಿಲ್ಲ,ನೋವು ಯಾರು ಕೇಳಲಿಲ್ಲ
ಒಬ್ಬರು ಹೊಗಳಲಿಲ್ಲ, ದಿನಕ್ಕೊಬ್ಬರಂತೆ ಬೈದರಲ್ಲ
ಕೆಲಸ ತಪ್ಪಲಿಲ್ಲ, ಒಂದು ದಿನವು ರಜೆಯಿಲ್ಲ
ಮಾತಿಲ್ಲ ಕಥೆಯಿಲ್ಲ,ದುಡಿತಕ್ಕೆ ಸರಿಯಾಗಿ ದುಡ್ಡಿಲ್ಲ..
ಸ್ವಚ್ಛ ಪರಿಸರಕ್ಕೆ ಕಾರಣಿಭೂತರಾದವರು
ಕರೋನ ಸಮಯದಲ್ಲಿ ಧೈರ್ಯವಾಗಿ ನಿಂತವರು
ಪೊಲೀಸರಲ್ಲ ಆದರೂ ಖಾಕಿ ಬಟ್ಟೆ ತೊಟ್ಟವರು
ಸಂಬಂಧಿಕರಲ್ಲ ಆದರು ನಮ್ಮ ಆರೋಗ್ಯಕ್ಕೆ ಕಾರಣವಾದವರು..
ಆಚರಣೆಗೆ ಮಾತ್ರ ಬೇಡ ಕಾರ್ಮಿಕರ ದಿನಾಚರಣೆ
ಸಿಗಲಿ ಕುಂದು ಕೊರತೆಗಳಿಗೆ ಪರಿಹಾರದ ಮನ್ನಣೆ
ಪ್ರತಿ ಕಾರ್ಮಿಕರಿಗೆ ಸಿಗಲಿ ಸರಕಾರಿ ನೌಕರಿಯ ಅಪ್ಪಣೆ..
ರಚನೆ:ಮುತ್ತು.ಯ.ವಡ್ಡರ ( ಶಿಕ್ಷಕರು) ಬಾಗಲಕೋಟ