ನೂತನ ಪಾರ್ಲಿಮೆಂಟ್ ಭವನದ ಉದ್ಘಾಟನೆ – ರಾಷ್ಟ್ರಪತಿ ಆಹ್ವಾನಿಸದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ.

ಹೊಸಪೇಟೆ ಮೇ.27

ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರನ್ನು ಆಹ್ವಾನ ಮಾಡದೇ ಇರುವ ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿಂದು ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಹೋರಾಟ ನಡೆಸಿದವು. ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಸಿಪಿಎಂ ಹಾಗೂ ಕಾಂಗ್ರೆಸ್ ನ ಅನೇಕ ಮುಖಂಡರು ಭಾಗವಹಿಸಿದ್ದರು.ಅಂಬೇಡ್ಕರ್ ಸರ್ಕಲ್ ಬಳಿ ಸೇರಿದ ಕಾರ್ಯಕರ್ತರು ಕಾಲ್ನಡಿಗೆ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ವಿರುದ್ಧಘೋಷಣೆಗಳನ್ನು ಕೂಗುತ್ತಾ “ಸಂವಿಧಾನ ರಕ್ಷಿತೋ ರಕ್ಷಿತಃ” ಪುನೀತ್ ರಾಜಕುಮಾರ್ ಸರ್ಕಲ್ ಬಳಿ ಬಂದು ಬಹಿರಂಗ ಸಭೆ ನಡೆಸಿದರು. ಈ ಸಭೆಯಲ್ಲಿ ಸಮಿತಿ ಸಂಚಾಲಕರಾದ ಎ ಕರುಣಾನಿಧಿ ಮಾತನಾಡಿ ಸಂವಿಧಾನದ 79 ನೇ ವಿಧಿಯು ಸಂಸತ್ತು ಎಂದರೆ ರಾಷ್ಟ್ರಪತಿಗಳು ಲೋಕಸಭೆ ಮತ್ತು ರಾಜ್ಯಸಭೆ ಎಂದಿದೆ.

ವಿಪಕ್ಷಗಳು ಇದನ್ನೇ ಒತ್ತಾಯಿಸುತ್ತಾ ಬಂದಿವೆ. ಆದಾಗ್ಯೂ ಸಹ ಪ್ರಧಾನಿ ಮೋದಿ, ರಾಷ್ಟ್ರಪತಿಗಳಿಗೆ ಆಹ್ವಾನ ನೀಡದಿರುವುದು ಸಂವಿಧಾನದ ಉದ್ದೇಶಪೂರ್ವಕ ಉಲ್ಲಂಘನೆಯಲ್ಲದೇ ಮತ್ತೇನಲ್ಲ. ಎಂದರಲ್ಲದೇ ಸೆಂಗೋಲ್ ಪ್ರತಿಷ್ಠಾಪನೆಯು ಪಾಳೇಗಾರಿ ಸಂಸ್ಕೃತಿಯ ಹೇರಿಕೆಯಲ್ಲದೆ ಮತ್ತೇನೂ ಅಲ್ಲ,ಕಾರಣ ಅಧಿಕಾರವನ್ನು ಸೆಂಗೋಲ್ ಮೂಲಕ ಹಸ್ತಾಂತರ ಮಾಡಲು ಈ ಭಾರತ ಯಾರಪ್ಪನ ಆಸ್ತಿಯಲ್ಲ .ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸುವವರನ್ನು ನಿರ್ಧರಿಸುವವರು ಜನತೆಯಾಗಿರುತ್ತಾರೆ ವಿನ: ಸೆಂಗೋಲ್ ಅಲ್ಲ ಎಂದರು. ಭಾಸ್ಕರ ರೆಡ್ಡಿ ಮಾತನಾಡಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಂವಿಧಾನದ ಈ ಉಲ್ಲಂಘನೆ ಪ್ರಮುಖ ವಿಷಯವಾಗಲಿದೆ ಎಂದರು. ಕಾಂಗ್ರೆಸ್ ಮುಖಂಡ ವೆಂಕಟರಮಣ ಮಾತನಾಡಿ ಬಿಜೆಪಿ ತನ್ನ ಮನುಸ್ಮೃತಿ ಅಜೆಂಡಾವನ್ನು ಹೇರಲು ಹೊರಟಿದ್ದು, ಮತದಾರರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸಿಪಿಎಂ ಹಿರಿಯ ಮುಖಂಡರಾದ ಎಂ ಜಂಬಯ್ಯನಾಯಕ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಮೇ 28 ಸಾವರ್ಕರ್ ಜನ್ಮದಿನದಂದು ನೂತನ ಸಂಸತ್ತಿನ ಉದ್ಘಾಟನೆಯನ್ನು ಹಮ್ಮಿಕೊಳ್ಳುವ ಮೂಲಕ ಭಾರತದ ಜನರು ನಡೆಸಿದ ಸ್ವಾತಂತ್ರ್ಯ ಚಳುವಳಿ ಮತ್ತು ಅದರ ಮುಂಚೂಣಿಯಲ್ಲಿರುವ ನಾಯಕರಿಗೆ ಅಪಮಾನ ಮಾಡಿದ್ದು ಮುಂಬರುವ ದಿನಗಳಲ್ಲಿ ಇದನ್ನು ಸವಾಲಾಗಿ ಸ್ವೀಕರಿಸುತ್ತೇವೆ ಎಂದರು. ಮಹಿಳಾ ಕಾಂಗ್ರೆಸ್ ಮುಖಂಡರಾದ ಭಾಗ್ಯಲಕ್ಷ್ಮಿ ಭರಾಡೆ ಮಾತನಾಡಿ ಪ್ರಧಾನಿ ಮೋದಿಯವರಿಗೆ ಬೇರೆ ದೇಶದ ಜನರ ಕಷ್ಟಗಳನ್ನು ಕೇಳುವದಕ್ಕೆ ಸಮಯವಿದೆ, ಆದರೆ ದೇಶದ ಮಹಿಳಾ ಕುಸ್ತಿಪಟುಗಳ ನೋವನ್ನು ಕೇಳುವಷ್ಟು ವ್ಯವಧಾನ ಇಲ್ಲದಿರುವುದು ವಿಷಾಧಕರ ಸಂಗತಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ಶೆಟ್ಟರ್ ಮುಖಂಡರಾದ ಯಲ್ಲಾಲಿಂಗ,ಕೆ ನಾಗರತ್ನ, ಮಂಜುನಾಥ್,ರಮೇಶ್ ,ತಾಯಪ್ಪನಾಯಕ,ಹಾಗೂ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರಾದ ಬಣ್ಣದ ಮನೆ ಸೋಮಶೇಖರ್, ಖಾಜಾ ಹುಸೇನ್, ವೀರಭದ್ರ ನಾಯಕ, ಎಂ ಡಿ ಜಾವೇದ್, ಯೋಗ ಲಕ್ಷ್ಮಿ ತಮ್ನಳ್ಳೆಪ್ಪ ಮೊದಲಾದವರು ಭಾಗವಹಿಸಿದ್ದರು.

ತಾಲೂಕು ವರದಿಗಾರ:ಮಾಲತೇಶ್. ಶೆಟ್ಲರ್. ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button