ವಿಶ್ವ ಬೈಸಿಕಲ್ ದಿನ ಆಚರಣೆ.
ನಾಗಠಾಣ ಜೂನ್.3

ಮೂಲಭೂತ ಸಾರಿಗೆ, ಪರಿವರ್ತನೆ ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಬಲಪಡಿಸಿ, ಸೈಕ್ಲಿಂಗ್ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಪ್ರತಿ ವರ್ಷ ಜೂನ್ 3 ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ. 2018 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತೀ ವರ್ಷದ ಜೂನ್ 3 ರಂದು “ವಿಶ್ವ ಬೈಸಿಕಲ್ ದಿನ’ವಾಗಿ ಆಚರಿಸಲು ನಿರ್ಧರಿಸಲಾಯಿತು. ಈ ಸುಸಮಯದಲ್ಲಿ ಜನಮನದ ಬೆಸುಗೆಯಾಗಿರುವ ಸೈಕಲ್, ಸದಾ ನಮ್ಮ ಒಡನಾಡಿಯಾಗಿರಲಿ ಎಂಬ ಸಂಕಲ್ಪವನ್ನು ನಾವು ತೊಡಬೇಕಿದೆ. ಶರವೇಗದಲ್ಲಿ ಚಲಿಸುವ ಬಗೆಬಗೆಯ ಕಾರು, ಬೈಕ್‌ಗಳನ್ನು ತುರ್ತು ಅಗತ್ಯಗಳಿಗೆ ಬಳಸಿದರೂ “ಆರೋಗ್ಯವೇ ಭಾಗ್ಯ’ ಎಂಬ ಸೂತ್ರದಡಿಯಲ್ಲಿ, ಮನದಂಗಳಕ್ಕೆ ಮನೋಲ್ಲಾಸವನ್ನು ನೀಡುವ ಆಪ್ತನಂತೆ ಈ ಸೈಕಲ್ ಅನ್ನು ನಾವೆಲ್ಲರೂ ಬಳಸಬೇಕಿದೆ. ಪ್ರಕೃತಿ ಮಾತೆಯನ್ನು ಮಾಲಿನ್ಯ ರಹಿತಳಾಗಿ ಕಾಪಾಡುವಲ್ಲಿ ಪ್ರತಿಯೊಬ್ಬರೂ ಪುಟ್ಟ ಕಾಣಿಕೆಯನ್ನು ನೀಡುವ ದಿಟ್ಟ ಮನಸ್ಸಿನಿಂದ ವಾರಕ್ಕೊಮ್ಮೆಯಾದರೂ ತಮ್ಮ ದೈನಂದಿನ ಅಗತ್ಯ ಕೆಲಸಗಳಿಗೆ ಸೈಕಲ್ ಅನ್ನೇ ಬಳಸಲು ಕಟಿಬದ್ಧರಾಗಬೇಕಿದೆ. ವಿಶ್ವ ಬೈಸಿಕಲ್ ದಿನವು ಬೈಸಿಕಲ್‌ನ ದೀರ್ಘಾಯುಷ್ಯ, ಅನನ್ಯತೆ ಮತ್ತು ಬಹುಮುಖತೆಯನ್ನು ಗುರುತಿಸಲು ಗಮನ ಸೆಳೆಯುತ್ತದೆ ಮತ್ತು ಇದು ಕೈಗೆಟುಕುವ, ವಿಶ್ವಾಸಾರ್ಹ, ಸರಳ, ಸ್ವಚ್ಛ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವ ಸುಸ್ಥಿರ ಸಾರಿಗೆ ಸಾಧನವಾಗಿದೆ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಅನುಶ್ರೀ ಶ್ರೀನಿಧಿ ಬಂಡೆ ಅವರು ಸೈಕಲ್ ಆಡಿ ವಿಶ್ವ ಬೈಸಿಕಲ್ ದಿನವನ್ನು ಆಚರಿಸಿದರು.