“ಗಣೇಶನ ಕಥೆಗಳು”…..

“ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ”

ಎಂದು ಸಕಲ ಕಾರ್ಯಗಳಲ್ಲಿ ನಿತ್ಯ ಪೂಜೆಗಳಲ್ಲಿ , ವಿದ್ಯಾರಂಭ ,ಗೃಹಪ್ರವೇಶ, ವಿವಾಹ, ಉಪನಯನ, ನಾಮಕರಣ ಹೇಗೆ ಎಲ್ಲ ಕಾರ್ಯಗಳಿಗೂ ಮೊದಲು ಅಗ್ರ ಪೂಜೆ ಸಲ್ಲುವುದು ಗಣೇಶನಿಗೆ. ದೇವತೆಗಳಲ್ಲಿ ಗಣೇಶನಿಗೆ ಅಗ್ರಪಟ್ಟ. ಗಣೇಶನ ಪೂಜೆ ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ಗಣಪತಿ ದೇವಸ್ಥಾನಗಳಿಲ್ಲದ ಊರುಗಳಿಲ್ಲ. ಕಲ್ಪನೆಗಳಿಗೂ ಕೊನೆಯಿಲ್ಲ. ಪುರಾಣಗಳಲ್ಲಿ, ಕಾವ್ಯಗಳಲ್ಲಿ, ಸಾಹಿತ್ಯ, ಜಾನಪದ, ಚಿತ್ರಕಲೆಗಳಲ್ಲಿ ಗಣೇಶ ಅಡಕವಾಗಿದ್ದಾನೆ. ವಿವಿಧ ಆಕಾರದ ಶೈಲಿಯ ಗಣಪತಿ ಮೂರ್ತಿಗಳು ಭಾರತದಲ್ಲಷ್ಟೇ ಅಲ್ಲ ನೇಪಾಳ ಮಯನ್ಮಾರ್, ಟಿಬೆಟ್, ಶ್ರೀಲಂಕಾ ಹೀಗೆ ಎಲ್ಲ ರಾಷ್ಟ್ರಗಳಲ್ಲೂ ಕಂಡು ಬರುತ್ತವೆ. ಭಾವುಕರ ಭಾವನೆ ,ಕಲಾವಿದರ ಕಲ್ಪನೆ,ಭಕ್ತರ ಬಯಕೆಯಂತೆ ಈ ದೇವರ ದೇವ ವ್ಯಾಪಿಸಿದ್ದಾನೆ.

ಗಣೇಶನಿಗೆ ಆನೆಯ ಮುಖ ಬರಲು ಅನೇಕ ಕಥೆಗಳಿವೆ. ಗಣೇಶನಿಗೆ ಆಶೀರ್ವದಿಸಲು ದೇವತೆಗಳೆಲ್ಲರೂ ಬಂದಿದ್ದರು. ಹಾಗೆಯೇ ಶನಿ ಮಹಾತ್ಮನು ಬಂದಿದ್ದ. ಶನಿ ತನ್ನ ಬಲಗಣ್ಣಿನ ತುದಿಯಿಂದಷ್ಟೇ ನೋಡಿದ. ಮಗುವಿನ ತಲೆ ಧರೆಗುರುಳಿತು. ಅದನ್ನು ನೋಡಿದ ಪಾರ್ವತಿ ಮೂರ್ಛೆ ಹೋದಳು. ಶ್ರೀಹರಿ ಗರುಡವನ್ನೇರಿ ಪುಷ್ಪಭದ್ರ ನದಿ ತೀರದಲ್ಲಿ ಉತ್ತರ ಅಭಿಮುಖವಾಗಿ ಮಲಗಿದ್ದ ಆನೆಯ ಮುಖವನ್ನು ತಂದು ಗಣೇಶನಿಗೆ ಸೇರಿಸಿದ. ಅಂದಿನಿಂದ ಗಣೇಶ ಗಜಾನನನಾದ.

ತನ್ನ ಶಿಶುವಿಗೆ ಅಂಗ ಹೀನ ಮಾಡಿದ ಶನಿಯನ್ನು ಅಂಗ ಊನಮವಾಗುವಂತೆ ಪಾರ್ವತಿ ಶಪಿಸಿದಳು. “ರವಿ” ತನ್ನ ಪುತ್ರನಿಗೆ ಬಂದ ಶಾಪಕ್ಕಾಗಿ ನಿನ್ನ ಮಗನು ಅಂಗವುನವಾಗಲೆಂದು ಪ್ರತಿ ಶಾಪಕೊಟ್ಟನು. ಪರಶುರಾಮನು 21 ಸಲ ಭೂಪ್ರದಕ್ಷಣೆ ಮಾಡಿ ಕ್ಷತ್ರಿಯರನ್ನು ಸಂಹರಿಸಿ ದಿವ್ಯಾಸ್ತ್ರಗಳನ್ನು ‘ಶಿವ’ ನಿಂದ ಪಡೆದ ಕಾರಣಕ್ಕೆ ಅಭಿನಂದಿಸಲು ಕೈಲಾಸಕ್ಕೆ ಬರುವಾಗ ದ್ವಾರದಲ್ಲಿ ಗಣಪತಿ ಇದ್ದ. ಪರಶುರಾಮನನ್ನು ಗಣಪತಿ ಒಳಗೆ ಬಿಡಲಿಲ್ಲ. ಆಗ ಪರಶುರಾಮನು ಕೊಡಲಿಯನ್ನು ಪ್ರಯೋಗಿಸಿದ. ಬಾಲಕನಾದ ಗಣೇಶ ತನ್ನ ಒಂದು ದಂತವನ್ನು ಚಾಚಿದ. ಆಗ ಒಂದು ದಂತ ತುಂಡಾಯಿತು . ವಿನಾಯಕ ಏಕದಂತ ನಾದ. ಈ ಕಥೆ ವೃತ್ತಾಂತ “ಬ್ರಹ್ಮ ವೈವರ್ತ” ಪುರಾಣದಲ್ಲಿ ಬರುತ್ತದೆ.

ಗಣೇಶ ಗಂಗಾ ನದಿ ತೀರದಲ್ಲಿ ಶ್ರೀವಿಷ್ಣುಧ್ಯಾನಮಗ್ನನಾಗಿದ್ದ. ದಿವ್ಯ ರೂಪಧಾರಿಯಾದ “ತುಳಸಿ” ದೇವಿ ಬಂದಳು. ಧ್ಯಾನ ಮಗ್ನನಾಗಿದ್ದ ಗಣೇಶನನ್ನು ಎಚ್ಚರಿಸಲು ವಿಫಲವಾಗಿ ನೀರನ್ನು ಎರಚಿದಳು. ಧ್ಯಾನ ಭಂಗವಾದರೂ ಸಿಟ್ಟಾಗದೆ ಅವಳ ಪ್ರೇಮ ಭಿಕ್ಷೆಯನ್ನು ನಯವಾಗಿ ತಿರಸ್ಕರಿಸಿದ. ತುಳಸಿಗೆ ಪ್ರತಿಯಾಗಿ ‘ಗಿಡವಾಗು’ ಎಂದು ಶಪಿಸಿದ. ಆದ್ದರಿಂದ ಗಣೇಶನಿಗೆ ತುಳಸಿಯಿಂದ ಪೂಜಿಸುವುದಿಲ್ಲ. ಆನೆಯ ಮುಖದವನಾದುದರಿಂದ ಗರಿಕೆ ಶ್ರೇಷ್ಠವೆನಿಸಿದೆ. 21 ಗರಿಕೆಗಳಿಂದ ಪೂಜಿಸಿ, 21 ಮೋದಕಗಳನ್ನು ಭಕ್ತಿ , ಶ್ರದ್ಧೆಯಿಂದ ಅರ್ಪಿಸಿದರೆ ಸಂತುಷ್ಟನಾಗಿ ಶೀಘ್ರ ವರ ನೀಡುವನು.

ಶಿವಪುರಾಣದಲ್ಲಿ ಪಾರ್ವತಿಯ ಮೈಯ ಮಣ್ಣಿನಿಂದ ಜನಿಸಿದ ಕಥೆ ಇದೆ. ಶಿವ ಗಜದ ಮುಖವನ್ನು ಜೋಡಿಸಿದ ಪ್ರಸಂಗ ಅಲ್ಲಿ ಬರುವುದು. ಗಣಪತಿಯು ವಿಶ್ವ ವ್ಯಾಪಿ ಪುರಾಣ ಪುರುಷನಾಗಿದ್ದು ಹತ್ತಾರು ಪುರಾಣಗಳಲ್ಲಿ ಗಜಪತಿಯ ಜನನ ,ಆಕಾರ ಲೀಲೆಗಳು ,ನಾನಾ ಹೆಸರುಗಳು ಬಂದ ಬಗ್ಗೆ ಉಲ್ಲೇಖಗಳು ಲಭಿಸುತ್ತದೆ. ಗಣಪತಿಯ ಅಪಾರ ಮಹಿಮೆ ಸಾರುವ ಪುರಾಣಗಳೆಂದರೆ1.ಶಿವ ಪುರಾಣ 2.ಗಣೇಶ ಪುರಾಣ 3.ಕಂದ ಪುರಾಣ 4.ಪದ್ಮ ಪುರಾಣ 5.ಲಿಂಗ ಪುರಾಣ 6.ಮುದ್ಗಲ ಪುರಾಣ 7. ವರಾಹ ಪುರಾಣ 8.ಮತ್ಸ್ಯ ಪುರಾಣ 9. ಬ್ರಹ್ಮ ವೈವರ್ತ 10.ವಿಷ್ಣು ಪುರಾಣ. ವೇದ ಮಹಾಭಾರತದಲ್ಲಿಯೂ ಸಹ ಗಣಪನ ವರ್ಣನೆ ಬರುತ್ತದೆ. ಗಣೇಶ ಶೀಘ್ರ ಲಿಪಿಕಾರ. ಸ್ವಲ್ಪವೂ ವಿಶ್ರಾಂತಿ ಇಲ್ಲದೆ ವ್ಯಾಸರು ಹೇಳಿದಂತೆ ಅರ್ಥೈಸಿಕೊಂಡು ಮಹಾಭಾರತವನ್ನು ಅವನು ಸಾಕಾರ ಗೊಳಿಸಿದನು.

ಸೃಷ್ಟಿಯ ಸಕಲ ಚರಾಚರ ವಸ್ತುಗಳು ಪಂಚಭೂತಗಳಿಂದಾಗಿವೆ. ಸೃಷ್ಟಿಯ ಮೂಲ ದ್ರವ್ಯಗಳೇ ಆಕಾಶ ,ವಾಯು ,ಬೆಂಕಿ, ನೀರು ಮತ್ತು ಮಣ್ಣು. ನಮ್ಮ ಪೂರ್ವಿಕರು ಒಂದಕ್ಕೊಂದು ಒಬ್ಬೊಬ್ಬ ಮೂರ್ತ ದೇವತೆಗಳೆಂದು ಕರೆದರು. ಜಲಾಧಿಪತಿಯೇ ಗಣಪತಿ ಗಣೇಶ ಚತುರ್ಥಿ ಎಂದು ಗಣಪತಿಯನ್ನು ಪೂಜಿಸಿ ಒಂದು ದಿನ, ಮೂರು ,ಐದು , ಹತ್ತು, ಹದಿನಾಲ್ಕು ಹೀಗೆ ಮನೆಯಲ್ಲಿ ಬೆಳಿಗ್ಗೆ ಹಾಗೂ ರಾತ್ರಿ ಪೂಜಿಸಿ ತಮ್ಮ ನಿಯಮದಷ್ಟು ದಿನವೂ ಪ್ರಾರ್ಥಿಸಿ ಮೂರ್ತಿಗಳನ್ನು ವಿಸರ್ಜಿಸುವುದು ಅವನದೇ ದ್ರವ್ಯ ನೀರಿನಲ್ಲಿ.

ಗಣೇಶನಿಗೆ ಪಂಚಕಜ್ಜಾಯ ಪ್ರಧಾನವಾದ ಪಕ್ವ. ಪಂಚಕಜ್ಜಾಯದ ಸತ್ವಕ್ಕೂ ಗಣಪತಿಯ ತತ್ವಕ್ಕೂ ಅವಿನಾಭಾವ ಸಂಬಂಧವಿದೆ. ಪಂಚಕಜ್ಜಾಯದಲ್ಲಿ ಕಡಲೆ ತೆಂಗಿನಕಾಯಿ, ಎಳ್ಳು, ಬೆಲ್ಲ, ಏಲಕ್ಕಿ ಇರುತ್ತವೆ. ಕಡಲೆ ಗುರು ಗ್ರಹದ ಧಾನ್ಯ ,ಗುರು ಜ್ಞಾನಕಾರಕ. ತೆಂಗಿನಕಾಯಿಗೆ ರವಿ ಗ್ರಹ .ರವಿ ಆತ್ಮಕಾರಕ. ಎಳ್ಳಿಗೆ ಶನಿಗ್ರಹ . ಶನಿಯು ಆಯುಷ್ಯಕಾರಕ. ಬೆಲ್ಲ ಕುಜ ಗ್ರಹ. ಕುಜನು ಭ್ರಾತೃಕಾರಕ. ಏಲಕ್ಕಿ ಶುಕ್ರ ಗ್ರಹ. ಶುಕ್ರನು ಕಳತ್ರಕಾರಕ. ಈ ಪಂಚಗ್ರಹಗಳು ಅಗ್ನಿ ತತ್ವ, ಜಲತತ್ವ ,ವಾಯುತತ್ವ ಮತ್ತು ಭೂಮಿತತ್ವ ಎಂಬ ನಾಲ್ಕು ತತ್ವಗಳನ್ನು ಪ್ರತಿನಿಧಿಸುತ್ತವೆ.ಈ ನಾಲ್ಕು ತತ್ವಗಳನ್ನು ಸಂತುಲಿತಗೊಳಿಸಿ ಪೌಷ್ಟಿಕವಾಗಿ ಪರಿವರ್ತಿಸುವವನೇ ಗಣಪತಿ. “ಗಣೇಶ ಚತುರ್ಥಿ” ಎನ್ನುವಲ್ಲಿ ಈ ನಾಲ್ಕು ತತ್ವಗಳ ಮೂರ್ತ ಸ್ವರೂಪನಾಗಿರುವೆನೆಂದು ಹಿರಿಯರು ಹೇಳುತ್ತಾರೆ.

ವಿಘ್ನ ನಿವಾರಕ, ಜ್ಞಾನ ದೇವತೆ ಮೊದಲು ಪೂಜನೀಯ ಗಣೇಶ ಭಾರತೀಯರ ಮನೆ — ಮನಗಳಲ್ಲಿ ಸದಾ ನೆಲೆಸಿದ್ದರೂ ಗಣೇಶ ಚತುರ್ಥಿಯ ಸಮಯದಲ್ಲಿ ಎಲ್ಲ ಬೀದಿಗಳಲ್ಲೂ ದರ್ಶನ ನೀಡುತ್ತಾನೆ. ಸ್ವಾತಂತ್ರದ ಹೋರಾಟದ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಮಹಾರಾಷ್ಟ್ರದಲ್ಲಿ ಗಣೇಶ ಪೂಜೆಯನ್ನು ಜನಜಾಗೃತಿಯ ಅಸ್ತ್ರವಾಗಿ ಉಪಯೋಗಿಸಿದರು. ಸಾರ್ವಜನಿಕ ಮಹತ್ವ ಪಡೆದ ನಂತರ ಉತ್ಸವವಾಗಿ ಹಳ್ಳಿಹಳ್ಳಿಗೂ ಹಬ್ಬಿತು.

ಕರ್ನಾಟಕದಲ್ಲಿ ಪ್ರಖ್ಯಾತ ಗಣಪತಿ ದೇಗುಲಗಳು ಇರುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಬೆಂಗಳೂರಿನ ರಾಗಿಗುಡ್ಡದಲ್ಲಿ ದಶಭುಜ ಶಕ್ತಿ ಸಹಿತ ಶ್ರೀ ಮಹಾಗಣಪತಿಯು ವಿಶಿಷ್ಟವೆನಿಸಿದೆ. ಬಸವನಗುಡಿ ದೊಡ್ಡ ಗಣೇಶ, ಹಟ್ಟಿಯಂಗಡಿ ಗಣೇಶ, ಆನೆಗುಡ್ಡೆ ಗಣಪತಿ, ಇಡುಗುಂಜಿ ಗಣಪತಿ, ಗೋಕರ್ಣದ ಗಣೇಶ, ನಂಜನಗೂಡಿನ ಕದಂಬ ಗಣಪತಿ ,ಹಂಪೆಯ ಕಡಲೆಕಾಳು ಗಣಪತಿ, ಸಾಸಿವೆ ಕಾಳು ಗಣಪ,ಬಾದಾಮಿ, ಐಹೊಳೆಯಲ್ಲಿ ಶಿಲಾಮೂರ್ತಿಗಳಿಗೆ ಲೆಕ್ಕವಿಲ್ಲ.

ಹೀಗೆ ವಿಘ್ನ ನಿವಾರಕನಾದ ಗಣೇಶನ ಕುರಿತು ನಾನು ಆ ಕಥೆಗಳಿವೆ. ಸಂಕಷ್ಟಗಳು ನಿವಾರಣೆಯಾಗಲೆಂದು ಸಂಕಷ್ಟಿಯನ್ನು ಮಧ್ಯಾಹ್ನವೆಲ್ಲ ಉಪವಾಸವಿದ್ದು ರಾತ್ರಿ ಚಂದ್ರೋದಯದ ನಂತರ ಊಟ ಮಾಡಿ ಆಚರಿಸುತ್ತಾರೆ ತಿಂಗಳಿಗೊಮ್ಮೆ ಹುಣ್ಣಿಮೆಯ ನಂತರದ ಚೌತಿ ಎಂದು ಆಚರಿಸುವ ಇದು ಗಣಪತಿಯ ಭಕ್ತಿಯ ದ್ಯೋತಕವಾಗಿದೆ.

ಎಸ್ ಎನ್ ಬಾರ್ಕಿ ಉಪನ್ಯಾಸಕರು ಆದರ್ಶ ಸಂಯುಕ್ತ ಪದವಿ ಪೂರ್ವ ಕಾಲೇಜು ಬೇವೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button