ಅ, 14 ರಂದು ಕರ್ನಾಟಕ ಸ್ವಾಭಿಮಾನ ನಡಿಗೆ ಸರ್ಕಾರ ನಮ್ಮ ಅಭಿವೃದ್ದಿಗಾಗಿ ನಿಗಮ ಮಂಡಳಿ ಸ್ಥಾಪಿಸಬೇಕು – ವೀಣಾ ಲಿಂಗತ್ವ ಅಲ್ಪಸಂಖ್ಯಾತರ.
ಹೊಸಪೇಟೆ ಅ.13

ಚಿಗುರು ಸಮುದಾಯ, ಸಂಗಮ ಸಂಸ್ಥೆ ಮತ್ತು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ ಸಂಯೋಗದಲ್ಲಿ, ಲಿಂಗತ್ವ ಮತ್ತು ಲೈಂಗಿಕ ಅಲ್ಪ ಸಂಖ್ಯಾತರನ್ನು ಬೆಳಕಿಗೆ ತರಲು ಮತ್ತು ಅವರ ವಿಮೋಚನೆಗಾಗಿ ಇದೇ ಅಕ್ಟೋಬರ್ 14 ರಂದು ಬೆಳೆಗ್ಗೆ 11:00 ಗಂಟೆಗೆ ನಗರದ ವಡಕರಾಯ ದೇವಸ್ಥಾನ ದಿಂದ ಅಂಬೇಡ್ಕರ್ ವೃತ್ತದ ವರೆಗೆ “ಕರ್ನಾಟಕ ಸ್ವಾಭಿಮಾನ ನಡಿಗೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೀಣಾ ಬೆಂಗಳೂರು ಲಿಂಗತ್ವ ಮತ್ತು ಲೈಂಗಿಕ ಅಲ್ಪ ಸಂಖ್ಯಾತ ಹೋರಾಟಗಾರರು ಇವರು ತಿಳಿಸಿದರು.ನಗರದ ಚರ್ಚ್ ಕಾಂಪ್ಲೆಕ್ಸ್ ನಲ್ಲಿರುವ ಕರ್ನಾಟಕ ಪತ್ರಕರ್ತರ ಸಂಘದ ಪತ್ರಿಕಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಹೆಚ್ಚಾಗಿ ಕಂಡು ಬರುವ ಅಮೆರಿಕದ ನ್ಯೂಯಾರ್ಕ್ ನಗರದ ಗ್ರೀನ್ವಿಚ್, ನಲ್ಲಿರುವ ಸ್ಟೋನ್ವಾಲ್ ಇನ್ ಎನ್ನುವ ಬಾರ್ ಮೇಲೆ ಪೊಲೀಸರು ಜೂನ್ 29, 1969 ರಂದು ದಾಳಿ ನಡೆಸಿದರು. ಪೊಲೀಸರ ನಿರಂತರ ದಾಳಿಯಿಂದ ಕೆರಳಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ದಾಳಿಯನ್ನು ಪ್ರಭಲವಾಗಿ ವಿರೋಧಿಸಿ, ಅಂದಿನಿಂದ ಇಂದಿನವರೆಗೂ ಅವರ ಬೆಂಬಲಿಗ ರೊಂದಿಗೆ ಪ್ರೈಡ್ (ಸ್ವಾಭಿಮಾನ) ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಮತ್ತು ಸ್ಟೋನ್ವಾಲ್ ದಂಗೆಯ ದಿನವನ್ನು ಆಚರಿಸಲು ವಿಶ್ವದಾದ್ಯಂತ ನಗರಗಳ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಬರಲಾಗಿದೆ. ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಧುನಿಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಚಳುವಳಿಯ ಹುಟ್ಟು ಎಂದು ಪರಿಗಣಿಸಲ್ಪಟ್ಟಿದೆ. ಈ ಸಂದರ್ಭದಲ್ಲಿ ಈ ನಮ್ಮ ಸ್ವಾಭಿಮಾನಿ ಕಾರ್ಯಕ್ರಮವು ಬೆಂಗಳೂರಿನಿಂದ ವಿಜಯನಗರ ಜಿಲ್ಲೆಗೆ ಕಾಲಿಟ್ಟಿದೆ. ಅಂದು ನಗರದಲ್ಲಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು, ನೃತ್ಯ ಮಾಡುತ್ತಾ, ಸಂಗೀತ ಹಾಡುತ್ತಾ, ವಾದ್ಯಗಳೊಂದಿಗೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಜಿಲ್ಲಾಧಿಕಾರಿಗಳಿಗೆ ನಮ್ಮ ಹಲವು ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಗುವುದು ಎಂದರು.ವೈಶಾಲಿ ಹೋರಾಟಗಾರ್ತಿ ಮಾತನಾಡಿ ಸಂವಿಧಾನ ಆರ್ಟಿಕಲ್ 21 ಪ್ರಕಾರ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ಜನ ಸಾಮಾನ್ಯರಿಗೆ ಹೇಗೆ ಸರ್ಕಾರದ ಮೂಲಭೂತ ಸೌಲಭ್ಯಗಳು ಸಿಗುತ್ತವೆಯೋ, ಹಾಗೆ ನಮಗೂ ಸಹ ಮೂಲಭೂತ ಸೌಲಭ್ಯಗಳು ಸಿಗಬೇಕು, ಸಂವಿಧಾನದಲ್ಲಿ ಪ್ರತಿಯೊಬ್ಬರು ಪ್ರತಿಯೊಂದನ್ನು ಪಡೆದು ಕೊಂಡು ಜೀವಿಸುವ ಹಕ್ಕಿದೆಯೋ ಹಾಗೆ ನಮಗೂ ಸಹ ಹಕ್ಕಿದೆ. ನಾವು ನಮ್ಮ ಮೂಲ ಕುಟುಂಬವನ್ನು ತೊರೆದಾಗ ನಮಗೆ ಮತ್ತೊಂದು ಕುಟುಂಬ ಸಿಗುತ್ತದೆ. ಎಲ್ಲರಂತೆ ನಮಗೂ ಸಹ ಸಹಜೀವನ ನಡೆಸ ಬೇಕೆನ್ನುವ ಆಸೆ ಆಕಾಂಕ್ಷೆಗಳು ಇರುತ್ತವೆ. ಅಂತ ಪರಿಸ್ಥಿತಿಯಲ್ಲಿ ನಮಗೆ ಆರ್ಥಿಕವಾಗಿ ಮೂಲಭೂತ ಸೌಲಭ್ಯಗಳು ಸಿಗದೇ ನಾವು ವಂಚಿತರಾಗಿ ಕಷ್ಟದ ಜೀವನ ಸಾಗಿಸುತ್ತೇವೆ. ನಮ್ಮನ್ನು ಈ ಸಮಾಜ ಒಪ್ಪಿಕೊಂಡು ಅಪ್ಪಿಕೊಂಡು ಬದುಕುವುದಕ್ಕೆ ಸಹಕರಿಸ ಬೇಕೆನ್ನುವ ಹಂಬಲ ನಮಗೂ ಇದೆ. ಮಂಗಳ ಮುಖಿಯರು ದೇವರೆಂದು ನಮ್ಮಿಂದ ಒಂದು ರೂಪಾಯಿ ಪಡೆದು ಆಶೀರ್ವಾದ ತೆಗೆದು ಕೊಳ್ಳುವವರೆಗೆ ನಮ್ಮನ್ನು ಗೌರವಿಸುತ್ತಾರೆ. ಮರುಕ್ಷಣವೇ ನಮ್ಮನ್ನು ನೋಡುವ ದೃಷ್ಟಿಯೇ ಬೇರೆ ಆಗುತ್ತದೆ. ನಮ್ಮ ಮೇಲೆಯೂ ನಿರಂತರ ದೌರ್ಜನ್ಯ ನಡೆಯುತ್ತಿವೆ ಇವೆಲ್ಲ ನಿಲ್ಲಬೇಕು. ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಸಮಾಜದಲ್ಲಿ ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ನಾಗರಿಕರು ಭಾಗವಹಿಸಿ ಸಹಕಾರ ಕೊಡಬೇಕೆಂದು ಮನವಿ ಮಾಡಿದರು.ಕರ್ನಾಟಕ ಸ್ವಾಭಿಮಾನ ನಡಿಗೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಹಾಗೂ ಇತರೆ ಗಣ್ಯ ವ್ಯಕ್ತಿಗಳು ಭಾಗವಸುವರು ಎಂದು ಮಾಹಿತಿ ನೀಡಿದರು.
ನಮ್ಮೊಂದಿಗೆ:- ಚಿಗುರು ಸಮುದಾಯ ಸೇವಾ ಸಂಸ್ಥೆ, ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ, ಸಂಗಮ, ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆ, ಕರ್ನಾಟಕ ರಾಜ್ಯ ಬುಡ್ಗ ಜಂಗಮ್, ಕರ್ನಾಟಕ ರಾಜ್ಯ ರೈತ ಸಂಘಟನೆ, ಬಸವ ಬಳಗ, ಕ್ರಿಶ್ಚಯನ್ ಕಮಿಟಿ, ಬಂಡಾಯ ಸಾಹಿತ್ಯ, ವಿಶೇಷ ಚೇತನರ ಸಂಘಟನೆ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಬಳ್ಳಾರಿ ಜಿಲ್ಲಾ ಅಲೆಮಾರಿ ಗೊಸಂಗಿ ಸಮಾಜ ಸಂಘ, ವಿಜಯನಗರ ಜಿಲ್ಲಾ ಬಾಬಾ ಸಾಹೇಬ ಡಾ, ಬಿ.ಆರ್ ಅಂಬೇಡ್ಕರ್ ಸಂಘ, ದಲಿತ ವಿದ್ಯಾರ್ಥಿ ಪರಿಷತ್ ವಿಜಯನಗರ ಜಿಲ್ಲಾ ಘಟಕ ಇವರೆಲ್ಲರ ಸಹಕಾರ ದೊಂದಿಗೆ ಕಾರ್ಯಕ್ರಮ ನೆರವೇರಲಿದೆ ಎಂದರು.
ಬಾಕ್ಸ್:-
“ಸರ್ಕಾರ ನಮಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು ಅದರಲ್ಲಿ 200 ಕೋಟಿಗೂ ಹೆಚ್ಚು ಮೀಸಲಿಟ್ಟು ನಮ್ಮ ಅಭಿವೃದ್ಧಿಗೆ ಒತ್ತು ಕೊಡಬೇಕು. ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ನಮ್ಮವರಿಗೆ ನಿವೇಶನದ ಹಕ್ಕುಪತ್ರ ನೀಡಿ ಸೂರು ಕಲ್ಪಿಸಿ ಕೊಡಬೇಕು”.
ಪ್ರಗತಿ ಚಿಗುರು ಸಮುದಾಯ ಸೇವಾ ಸಂಸ್ಥೆ ಸದಸ್ಯರು, ಮಂಜಮ್ಮ ಜೋಗತಿ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ ಜಿಲ್ಲಾ ಘಟಕದ ಸಹ ಅಧ್ಯಕ್ಷರು ಕೂಡ್ಲಿಗಿ, ಸುಧಾ ಕಲ್ಲಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಚಿಗುರು ಸಮುದಾಯ ಸದಸ್ಯರು ಸುದ್ದಿ ಗೊಷ್ಟಿಯಲ್ಲಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ