ಉದ್ಯೋಗ ಖಾತ್ರಿ ಯೋಜನೆಯಡಿ ಬೇಡಿಕೆ ಸಲ್ಲಿಸಿ – ಸಹಾಯಕ ನಿರ್ದೇಶಕ ಸೋಮನಗೌಡ ಸಲಹೆ.
ಅಂಕಶುದೊಡ್ಡಿ ಅ.19

ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಶನಿವಾರ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 2025-26 ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಲು ಐಇಸಿ ಕಾರ್ಯಕ್ರಮದಡಿ ಜಾಗೃತಿ ಕಾರ್ಯಕ್ರಮ ಜರುಗಿತು.ಸಹಾಯಕ ನಿರ್ದೇಶಕರಾದ (ಪಂಚಾಯತ್ ರಾಜ್) ಸೋಮನಗೌಡ ಪಾಟೀಲ್ ಮಾತನಾಡಿ, ಅಧಿಕಾರ ವಿಕೇಂದ್ರೀಕರಣದಲ್ಲಿ ಸರ್ಕಾರದ ಪ್ರತಿಯೊಂದು ಯೋಜನೆಯಲ್ಲಿ ಸಾರ್ವಜನಿಕರು ಭಾಗವಹಿಸುವುದು ಪ್ರಮುಖವಾಗಿದೆ. ಬಡತನ ನಿವಾರಣೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ನಿರ್ಣಾಯಕವಾಗಿದೆ. ಅನೇಕ ಕುಟುಂಬಗಳು ಮಹಾ ನಗರಗಳಿಗೆ ಕೆಲಸ ಅರಸಿ ಗುಳೆ ಹೋಗುವುದು ತಪ್ಪಿಸಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗದೇ ಊರಿನಲ್ಲಿಯೇ ತಂದೆ ತಾಯಿಯ ವಾತ್ಸಲ್ಯದಲ್ಲಿ ಬೆಳೆಯುವಂತಾಗಿದೆ. ಸ್ಥಳೀಯರು ತಮ್ಮ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಬೇಡಿಕೆ ಸಲ್ಲಿಸಬೇಕು. ನವೆಂಬರ್ ಅಂತ್ಯದ ವರೆಗೆ ವಿವಿಧ ಗ್ರಾ.ಪಂ ಗಳಲ್ಲಿ ವಾರ್ಡ್ ಮತ್ತು ಗ್ರಾಮ ಸಭೆ ನಿಗದಿ ಪಡಿಸಿದ್ದು, ಎಲ್ಲೆಡೆ ಪ್ರಚಾರ ಒದಗಿಸಲಾಗುತ್ತಿದೆ. ಸಂಗ್ರಹವಾಗುವ ಬೇಡಿಕೆ ಮತ್ತು ತಾಲೂಕಿಗೆ ನಿಗದಿ ಪಡಿಸಿದ ಗುರಿಯ ಅನುಸಾರ ಕ್ರಿಯಾ ಯೋಜನೆಯನ್ನು ಅನುಮೋದನೆಗಾಗಿ ಜಿಲ್ಲಾ ಪಂಚಾಯತಿಗೆ ಕಳುಹಿಸಲಾಗುವುದು ಎಂದರು.ಅಂಕುಶದೊಡ್ಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಶಾಂತಪ್ಪ ಮಾತನಾಡಿ, 2025-26 ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಲು ಎಲ್ಲಾ ಹಳ್ಳಿಗಳಲ್ಲಿ ಪ್ರಚಾರ ಕೈಗೊಳ್ಳಲಾಗಿದೆ. ಎರಡನೇ ಹಂತದಲ್ಲಿಯೂ ಬೇಡಿಕೆ ಸಲ್ಲಿಸಲು ಅವಕಾಶವಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿ ಕೊಳ್ಳಬೇಕು ಎಂದರು. ಈ ವೇಳೆ ಗ್ರಾಪಂ ಅಧ್ಯಕ್ಷರಾದ ಅಮರಮ್ಮ, ಉಪಾಧ್ಯಕ್ಷರಾದ ದೊಡ್ಡ ಬಸ್ಸಮ್ಮ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ಸ್ಥಳೀಯ ಸ್ವ ಸಹಾಯ ಒಕ್ಕೂಟದ ಸದಸ್ಯೆಯರು, ಗ್ರಾ.ಪಂ ಸದಸ್ಯರು, ಗ್ರಾಮ ಪಂಚಾಯತಿ ಸಿಬ್ಬಂದಿ ಇತರರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ