ದೇಶದ ನಾಲ್ಕು ದಿಕ್ಕುಗಳಲ್ಲಿ ಬುದ್ದ ವಿಹಾರ ಸ್ಥಾಪಿಸಬೇಕು – ರಾಜಶೇಖರ್.
ಚಿಕ್ಕಮಗಳೂರು ಅ.21

ಶೋಷಿತ ಸಮಾಜಗಳ ಸಮಾನತೆಗಾಗಿ ಹೋರಾಟ ಮಾಡಿದ ಮೂಕ ನಾಯಕ ಡಾ, ಬಿ.ಆರ್ ಅಂಬೇಡ್ಕರ್ ಅವರು ಮೂಕ ನಾಯಕ ಪತ್ರಿಕೆಯನ್ನು ಪ್ರಾರಂಭಿಸಿ ಅರಿವು ಮೂಡಿಸುವ ಕೆಲಸ ಮಾಡಿದರು. ಎಂದು ಸಾಹಿತಿ ಲೇಖಕರಾದ ತಹಶೀಲ್ದಾರ್ ರಾಜಶೇಖರ್ ಮೂರ್ತಿ ಹೇಳಿದರು. ಅವರು ಇಂದು ಚಿಕ್ಕಮಗಳೂರು ತೇಗೂರು ಬಳಿ ಇರುವ ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ ಭಾರತೀಯ ಬೌದ್ಧ ಮಹಾಸಭಾ ಸಭೆಯಲ್ಲಿ ಮಾತನಾಡಿದರು. 1928 ರಲ್ಲಿ ಅಂಬೇಡ್ಕರ್ ರವರು ಸೈಮನ್ ಕಮಿಷನ್ ನಲ್ಲಿ ಸಮಾನ ಮತದಾನದ ಹಕ್ಕು ಗಾಗಿ ಮನವಿ ಮಾಡಿರುತ್ತಾರೆ. ಭಾರತದ ಇತಿಹಾಸ ದೊಡ್ಡ ಕ್ರಾಂತಿ ಅಂಬೇಡ್ಕರ್ ಅವರ ಕುರಿತು ಭಾರತದ ಪತ್ರಿಕೆಗಳು ಬರೆಯುವದಿಲ್ಲ ಆದರೆ ಜಪಾನ್, ಅಮೆರಿಕ ಪತ್ರಿಕೆಗಳು ಬರೆಯುತ್ತವೆ. ಕೊನೆಗೆ ಪ್ರಬುದ್ಧ ಭಾರತ ಎಂಬ ಪತ್ರಿಕೆಯನ್ನು ಹೊರ ತರುತ್ತಾರೆ. 1956 ಅಕ್ಟೋಬರ್ 14 ರಂದು ಬೌದ್ಧ ಧರ್ಮವನ್ನು 5 ಲಕ್ಷ ಅನುಯಾಯಿ ಗಳೊಂದಿಗೆ ನಾಗಪುರದಲ್ಲಿ ಸ್ವೀಕಾರ ಮಾಡುತ್ತಾರೆ. ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬೌದ್ಧ ವಿಹಾರಗಳನ್ನು ಸ್ಥಾಪಿಸಬೇಕು ಎಂದು ಅಂಬೇಡ್ಕರ್ ಅವರು ಹೇಳಿದರು. ಎಲ್ಲಾ ಜಾತಿಯವರು ಬೌದ್ಧ ಧಮ್ಮ ಸ್ವೀಕಾರ ಮಾಡಬಹುದು ಜಾತಿ ಬಿಡಬೇಕು, ನಿಮಗೆ ಗೌರವ ಇಲ್ಲದ ಕಡೆ ಹೋಗಬೇಡಿ ನಿಮ್ಮ ಮಕ್ಕಳಿಗೆ ಧಮ್ಮದ ದಾರಿ ತೋರಿಸಿ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಧಮ್ಮ ಮಾರ್ಗ ಒಂದೆ ಇರುವುದು ಎಂದು ಹೇಳಿದರು.

ಮಾಜಿ ಸಚಿವರಾದ ಬಿ.ಬಿ ನಿಂಗಯ್ಯನವರು ಮಾತನಾಡಿ ಬುದ್ಧನನ್ನು ಒಪ್ಪಿ ಅಪ್ಪಿಕೊಂಡು ಡಾ, ಬಿಆರ್ ಅಂಬೇಡ್ಕರ್ ಹಾದಿಯಲ್ಲಿ ನಡಿಯೋಣ, 30 ಕೋಟಿ ಜನಸಂಖ್ಯೆ ನಾವಿದ್ದೇವೆ, ಮನುಷ್ಯನ ಸ್ವಾಭಿಮಾನ ಉದ್ಧಾರಕ್ಕಾಗಿ ಧರ್ಮ ಇರಬೇಕು, ಸಾಮಾಜಿಕವಾಗಿ ಹಿಂದುಳಿದಿದ್ದೇವೆ ಶೋಷಣೆ ಅಸಮಾನತೆಯಿಂದ ಹೊರ ಬರಲು ಬೌದ್ಧ ಧರ್ಮ ಪಾಲಿಸೋಣ ರಾಜಕೀಯ ವೈಯುಕ್ತಿಕ, ಸಾಮಾಜಿಕವಾಗಿ ನಾವೆಲ್ಲರೂ ಒಂದೇ, ಅಂಬೇಡ್ಕರ್ ವಾದಿಗಳು ಎಂದು ಹೇಳಿದರು. ಭಾರತೀಯ ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷರಾದ ಶಿವರಾಜ್ ರವರು ಮಾತನಾಡಿ ಡಾ, ಬಿ.ಆರ್ ಅಂಬೇಡ್ಕರ್ ಅವರು 1954 ರಲ್ಲಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾವನ್ನು ಬಾಂಬೆಯಲ್ಲಿ ನೋಂದಣಿ ಮಾಡಿಸಿದ್ದಾರೆ. ಬಾಬಾ ಸಾಹೇಬರು ಸಾಮಾಜಿಕ ಚಳುವಳಿ ರಾಜಕೀಯ ಚಳುವಳಿ ನಂತರ ಧಾರ್ಮಿಕ ಚಳುವಳಿ ಮಾಡಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮೂರು ಜನ ನವದಂಪತಿಗಳಿಗೆ ಪಂಚಶೀಲಗಳನ್ನು ಬೋಧಿಸಿ ಧಮ್ಮ ದೀಕ್ಷೆ ನೀಡಿದರು. ಮನೆ ಮನೆಯಲ್ಲಿ ಧಮ್ಮ ಆಚರಣೆ ಮಾಡಬೇಕು ಎಂದು ಕರೆ ಕೊಟ್ಟರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್, ಬಿಎಸ್ಐ ನ ಕೋಶ ಅಧ್ಯಕ್ಷರಾದ ಅರ್ಜುನ್ ಕೇಸರಿ, ಬಿ.ಎಸ್.ಐ ನ ನಿಕಟ ಪೂರ್ವ ಅಧ್ಯಕ್ಷರಾದ ಎಂಎಸ್ ಅನಂತು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಅನಿಲ್ ಕುಮಾರ್ ಸ್ವಾಗತಿಸಿ ಲಕ್ಷ್ಮಣ್ ನಿರೂಪಿಸಿ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು