ಬಿಎಂಎಂ ಕಾರ್ಖಾನೆಯಿಂದ ವಾತಾವರಣ ಮಲೀನವಾಗುತ್ತಿದೆ – ಸರದಾರ್ ಸೇವಾಲಾಲ್ ಸ್ವಾಮೀಜಿ ಬಂಜಾರ ಗುರುಪೀಠ.
ಮರಿಯಮ್ಮನಹಳ್ಳಿ ಫೆ.03

ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ರಾಷ್ಟ್ರೀಯ ಗೋರ್ (ಬಂಜಾರ) ಮಳಾವ್ ವಿಜಯನಗರ ಜಿಲ್ಲಾ ಘಟಕ ದಿಂದ ನೂರಾರು ಸಂಖ್ಯೆಯಲ್ಲಿ ಸೇರಿ ಬೆಳಿಗ್ಗೆ 11:45 ರ ಸುಮಾರಿಗೆ ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಬೃಹತ್ ಮಟ್ಟದಲ್ಲಿ ಪಾದಯಾತ್ರೆ ಮೂಲಕ ಆರಂಭವಾಗಿ ದಾರಿಯುದ್ಧಕ್ಕೂ ಬಿಎಂಎಂ ಕಾರ್ಖಾನೆಯ ನ್ಯೂನತೆಗಳ ಧಿಕ್ಕಾರಗಳನ್ನು ಕೂಗುತ್ತಾ ಕೂಲಿ ಕಾರ್ಮಿಕರಿಗೆ ಸಂಭಳ ಹೆಚ್ಚಿಸದ ಅನ್ಯಾಯವನ್ನು ಸರಿಪಡಿಸ ಬೇಕು, ಭೂಮಿ ಕೊಟ್ಟವರಿಗೆ ಉದ್ಯೋಗ ಕೊಡಬೇಕು, ಸಂಸ್ಕರಿಸದೆ ಬಿಡುತ್ತಿರುವ ವಿಷಯುಕ್ತ ವಿಪರೀತ ಧೂಳು ಹಾಗೂ ಹೊಗೆ ನಿಲ್ಲಿಸಬೇಕು, ಡಣಾಪುರ ಪಂಚಾಯಿತಿಗೆ 16.₹ ಕೋಟಿ ತೆರಿಗೆ ಪಾವತಿಸ ಬೇಕು ಎಂದು ಅಗ್ರಹಿಸುತ್ತ ಸಾಗಿ 1:00 ಗಂಟೆ ಸುಮಾರಿಗೆ ಬಿಎಂಎಂ ಕಾರ್ಖಾನೆಯ ಮುಖ್ಯ ದ್ವಾರದ ಬಾಗಿಲು ಗೆಟ್ ಬಳಿ ತಲುಪಿ 2 ಗಂಟೆಗಳ ಕಾಲ ಪ್ರತಿಭಟನೆ ನಡೆಯಿತು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪರಮ ಪೂಜ್ಯ ಸರದಾರ್ ಸೇವಾಲಾಲ್ ಸ್ವಾಮೀಜಿ ಬಂಜಾರ ಗುರುಪೀಠ ಚಿತ್ರದುರ್ಗ ಇವರು ಈ ದೇಶದ ಶಕ್ತಿ ಬೆನ್ನೆಲುಬು ರೈತರು ಮತ್ತು ಕೂಲಿ ಕಾರ್ಮಿಕರು ಅವರಿಗೆ ಅನ್ಯಾಯ ವಾಗಬಾರದು. ಈ ಹೋರಾಟ ಕೇವಲ ಬಂಜಾರ ಸಮುದಾಯಕ್ಕೆ ಮಾತ್ರವಲ್ಲ. ಕಾರ್ಖಾನೆಯ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಿಗೆ ಧೂಳು, ವಿಷ ಅನಿಲ, ಹೊಗೆಯಿಂದಾಗಿ ಜನರ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿದೆ ಇದನ್ನು ಕೂಡಲೇ ಗಂಭೀರವಾಗಿ ತೆಗೆದು ಕೊಳ್ಳಬೇಕು. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತಿದೆ. ರೈತರಿಗೆ ಕೂಲಿ ಕಾರ್ಮಿಕರಿಗೆ ಅನ್ಯಾಯ ವಾಗುತ್ತಿರುವ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮಾಹಿತಿ ಇಲ್ಲದಿರಬಹುದು ಗೊತ್ತಿದ್ದರೆ ಈ ರೀತಿ ಅನ್ಯಾಯ ವಾಗುವುದಕ್ಕೆ ಬಿಡುತ್ತಿರಲಿಲ್ಲ. ಇಂದು ರೈತ ಮತ್ತು ಕೂಲಿ ಕಾರ್ಮಿಕರ ಪರವಾಗಿ ಸ್ವಾಮೀಜಿಗಳು ಬೀದಿಗೆ ಇಳಿಯುವಂತಹ ಪರಿಸ್ಥಿತಿ ಎದುರಾಗಿದೆ. ಇದು ಸಾಂಕೇತಿಕವಾದ ಪ್ರತಿಭಟನೆ. ಅಂಬೇಡ್ಕರ್ ಅವರು ಹೇಳಿದಂತೆ ಎಲ್ಲರಿಗೂ ಒಂದೇ ನ್ಯಾಯ ಸಮಬಾಳು ಸಮಪಾಲು ಆ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಸಂಘಟಕರು ಕಾರ್ಖಾನೆಯವರ ನ್ಯೂನತೆಗಳ ಕುರಿತು ಈಗಾಗಲೇ ಎಲ್ಲವನ್ನು ಹೇಳಿದ್ದಾರೆ. ನಮ್ಮವರ ಬೇಡಿಕೆಯ ಹೋರಾಟಕ್ಕೆ ಸ್ಪಂದಿಸಬೇಕು, ಇದಕ್ಕಾಗಿ ಕಾರ್ಖಾನೆಯವರಿಗೆ 15 ದಿನಗಳ ಕಾಲಾವಕಾಶ ಕೊಡುತ್ತೇವೆ. ನಮ್ಮ ಬೇಡಿಕೆಗಳಿಗೆ ಕಾರ್ಖಾನೆಯವರು ಈಡೇರಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು. ಸಂಘದ ಜಿಲ್ಲಾಧ್ಯಕ್ಷ ಹನುಮಾನಾಯ್ಕ್, ವಕೀಲರಾದ ಲಿಂಬ್ಯಾ ನಾಯ್ಕ್, ಶಿವಕುಮಾರ್ ನಾನಾಯ್ಕ್, ಮಾತನಾಡಿ ಭೂಮಿ ಕೊಟ್ಟಿರುವ ರೈತರಿಗೆ ಉದ್ಯೋಗ ಕೊಡಬೇಕು, ಉದ್ಯೋಗ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಸಂಬಳವನ್ನು ಹೆಚ್ಚಿಸಬೇಕು, ಗಣಾಪುರ ಗ್ರಾಮ ಪಂಚಾಯಿತಿಗೆ 16.₹ ಕೋಟಿ ತೆರಿಗೆಯನ್ನು ಪಾವತಿಸ ಬೇಕು, ವಿಪರೀತವಾಗಿ ಬಿಡುತ್ತಿರುವ ಧೂಳನ್ನು ನಿಯಂತ್ರಿಸಬೇಕು ಎಂದು ಅಗ್ರಹಿಸಿದರು. ಪಾರ್ವತಿ ಬಾಯಿ ಮಾತನಾಡಿ ನಮ್ಮ ಗುಂಡಾ ಗ್ರಾಮದ ಬಳಿ ಹೊಸ ಪ್ಲಾಂಟ್ ನಿಂದ ಬಿಡುತ್ತಿರುವ ವಾಸನೆಯುಕ್ತ ಹೊಗೆ ಹಾಗೂ ವಿಪರೀತ ಧೂಳಿನಿಂದ ಆರೋಗ್ಯ ಕೆಡುತ್ತಿದ್ದು, ನಿರಂತರವಾಗಿ ಆಸ್ಪತ್ರೆಗೆ ಹಣ ಖರ್ಚು ಮಾಡುತ್ತಿದ್ದೇವೆ ಮತ್ತು ದೊಡ್ಡ ಮಟ್ಟದ ಶಬ್ದದಿಂದಾಗಿ ರಾತ್ರಿ ಮಲಗಿದ ಮಕ್ಕಳು ಬೆದರುತ್ತಿದ್ದಾರೆ. ಇದರಿಂದ ನಮಗೆ ನಮ್ಮ ಮಕ್ಕಳ ಭವಿಷ್ಯವೇನು ಎಂದು ಆತಂಕ ವ್ಯಕ್ತವಾಗುತ್ತಿದೆ. ಈ ಕಾರ್ಖಾನೆಯಿಂದ ಗ್ರಾಮಕ್ಕೆ ಯಾವುದೇ ಪ್ರಯೋಜನ ವಾಗಿಲ್ಲ ಸಮಸ್ಯೆಗಳ ಹೆಚ್ಚಾಗುತ್ತಿವೆ ಎಂದು ಹೇಳಿದರು. ಕಾರ್ಖಾನೆಯ ಮುಖ್ಯಸ್ಥರಾದ ಗಣೇಶ್ ಹೆಗಡೆಯವರು ಪ್ರತಿಭಟನಾಕಾರ ಬೇಡಿಕೆಗಳನ್ನು ಕೇಳಿ ಮಾತನಾಡಿ ನೀವು ಕೂಡಲೇ ಕೆಲಸಕ್ಕೆ ತೆಗೆದು ಕೊಳ್ಳಬೇಕೆಂದು ಆಗ್ರಹಿಸಿದರೆ ಸಾಧ್ಯವಿಲ್ಲ ವ್ಯವಸ್ಥೆಯಲ್ಲಿ ಆ ರೀತಿ ಮಾಡಲು ಸಾಧ್ಯವಿಲ್ಲ, ಇದೇ ರೀತಿ ಬೇರೆಯವರು ಪ್ರತಿಭಟನೆ ಮಾಡಿ ಆಗ್ರಹಿಸುತ್ತಾರೆ ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ, ನಿಮ್ಮ ಬೇಡಿಕೆ ಏನಿದೆ ಕೊಡಿ ಪರಿಶೀಲಿಸಿ ಕಂಪನಿಯ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ. ಗುಂಡಾ ಗ್ರಾಮವನ್ನು ಬೇರೆ ಕಡೆ ಸ್ಥಳಾಂತರಿಸಲು ಕೆಲವು ಆಂತರಿಕ ಸಮಸ್ಯೆಗಳು ಎದುರಾಗುತ್ತಿವೆ ಅವುಗಳನ್ನು ಇಲ್ಲಿ ಪ್ರಸ್ತಾಪಿಸಲು ಸೂಕ್ತವಲ್ಲ, ನಾನು ಖುದ್ದಾಗಿ ಗುಂಡಾ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದೇನೆ ಮುಂದಿನ ದಿನಗಳಲ್ಲಿ ಇವೆಲ್ಲವೂ ಸರಿ ಹೋಗುತ್ತದೆ ಎಂದು ಭರವಸೆ ನೀಡಿದರು.
ವಾಗ್ವಾದ:-
ಕಾರ್ಖಾನೆಯ ಮುಖ್ಯಸ್ಥರು ಗಣೇಶ್ ಹೆಗಡೆ ಮತ್ತು ಪ್ರತಿಭಟನಾಕಾರರು ಮಾತನಾಡುತ್ತಿರುವಾಗ ಕಾರ್ಖಾನೆಗೆ ಸಂಬಂಧಿಸಿದಲ್ಲದವರು ಕಾರ್ಖಾನೆಯ ಪರವಾಗಿ ಪ್ರತಿಭಟನಾಕಾರ ರೊಂದಿಗೆ ಮಾತಿಗಿಳಿದಾಗ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿ ನೀವು ಯಾರು ಎಂದು ಕೇಳಿದಾಗ ಸಣ್ಣ ವಾಗ್ವಾದಕ್ಕೆ ಕಾರಣವಾಯಿತು. ಅವರು ಕಾರ್ಖಾನೆಯಲ್ಲಿ ಗುತ್ತಿಗೆದಾರರಾಗಿದ್ದಾರೆ ಹಾಗಾಗಿ ಮಧ್ಯ ಪ್ರವೇಶಿಸಿ ಕಾರ್ಖಾನೆ ಪರವಾಗಿ ಮಾತನಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದವು. ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ನೇತೃತ್ವದಲ್ಲಿ ಸಿಪಿಐ ವಿಕಾಸ್ ಲಮಾಣಿ, ಪಟ್ಟಣದ ಪಿಎಸ್ಐ ಮೌನೇಶ್ ರಾಥೋಡ್ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಬಿಗಿ ಭದ್ರತೆಯಲ್ಲಿ ಪ್ರತಿಭಟನೆಯು ಯಾವುದೇ ಅಹಿತಕರ ಘಟನೆ ನಡೆದಂತೆ ನಡೆಯಿತು.ಪರಮ ಪೂಜ್ಯ ಶ್ರೀತಿಪ್ಪೆಸ್ವಾಮಿ ಮಹಾರಾಜ ಸೇವಾಲಾಲ್ ಶಿವ ಶಕ್ತಿ ಪಿಠ ಸಂಡೂರು, ಜಿಲ್ಲಾ ಅಧ್ಯಕ್ಷರು, ಎಲ್ ಹನುಮ ನಾಯಕ್ ಮೋದಿ, ರಾಜು ನಾಯಕ್, ಮಂಜು ನಾಯಕ್, ಅನಿಲ್ ನಾಯಕ್ ಕುಮಾರ್, ಗೋಪಿ ಕಾವೇರಿ, ಬಾಯಿ ಶಾಂತಿಬಾಯಿ, ಪಾರ್ವತಿ ಇತರರು ಹೋರಾಟದಲ್ಲಿ ಭಾಗಿಯಾಗಿದ್ದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ