ಆರ್ಮಿ ಸೈನಿಕರಿಗೆ ನೀಡುವ ಸೌಲಭ್ಯಗಳನ್ನು – ಪ್ಯಾರಾ ಮಿಲಿಟರಿ ಸೈನಿಕರಿಗೆ ಕಲ್ಪಿಸುವಂತೆ ಒತ್ತಾಯ.
ಹುನಗುಂದ ಫೆ.07

ದೇಶಕ್ಕೆ ಗಂಡಾಂತರ ಬಂದಾಗ ರಕ್ಷಣಾ ವಿಷಯದಲ್ಲಿ ಆರ್ಮಿ, ನೇವಿ, ಏರ್ ಫೋರ್ಸ್ ಗಳಿಗಿಂತ ಮುಂಚೂಣಿಯಲ್ಲಿ ಸೇವೆ ಗೈಯುವ ಪ್ಯಾರಾ ಮಿಲಿಟರಿ ಸೈನಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೇತನ ಮತ್ತು ಸೌಲಭ್ಯಗಳಲ್ಲಿ ಮಲತಾಯಿ ಧೋರಣೆಯನ್ನು ತಳೆಯುತ್ತಿದೆ ಎಂದು ಪ್ಯಾರಾ ಮಿಲಿಟರಿ ವೆಲ್‌ಫೇರ ಅಸೋಷಿಯೇಶನ್ ಹುನಗುಂದ-ಇಲಕಲ್ಲ ತಾಲೂಕಾಧ್ಯಕ್ಷ ಪ್ರಭುಲಿಂಗಯ್ಯ ಕಾಳಹಸ್ತಿಮಠ ತೀವ್ರ ನೋವುವನ್ನು ವ್ಯಕ್ತಪಡಿಸಿದ್ದರು. ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಹುನಗುಂದ ಇಲಕಲ್ ಅವಳಿ ತಾಲೂಕಿನಲ್ಲಿ ೧೮೫ ಹಾಲಿ ಮತ್ತು ಮಾಜಿ ಪ್ಯಾರಾ ಮಿಲಿಟರಿ ಸೈನಿಕರಿದ್ದು. ಆರ್ಮಿ, ನೇವಿ, ಏರ್ ಫೋರ್ಸ್ ಸೈನಿಕರಿಗೆ ಸೇವೆಯಿಂದ ನಿವೃತ್ತಿ ಹೊಂದಿದ ಬಳಿಕ ವೈದ್ಯಕೀಯ, ಶಿಕ್ಷಣ, ಮರು ನೇಮಕಾತಿ, ಕ್ಯಾಂಟೀನ್ ವ್ಯವಸ್ಥೆ, ಪಿಂಚಣಿ ಸೇರಿದಂತೆ ಅನೇಕ ಸೌಲಭ್ಯಗಳು ಸಿಗುತ್ತಿದೆ ಆದರೇ ಅವರಷ್ಟೇ ಮತ್ತು ಅವರಿಗಿಂತಲೂ ಮುಂಚೂಣಿಯಲ್ಲಿ ಕೆಲಸ ಮಾಡುವ ಸಿಆರ್‌ಪಿಎಫ್, ಬಿಎಸ್ಎಫ್, ಸಿಐಎಸ್ಎಫ್, ಎಸ್ಎಸ್ ಬಿ, ಐಟಿಬಿಎಫ್, ಎಆರ್ ಪ್ಯಾರಾ ಮಿಲಿಟರಿ ಸೈನಿಕರಿಗೆ ಈ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಅದರಲ್ಲೂ ೨೦೦೬ ರಿಂದ ಪಿಂಚಣಿ ಸೌಲಭ್ಯ ಕೂಡ ಸಿಗದೇ ದೇಶದ ಗಡಿ ಕಾಯುವ ಸೈನಿಕರ ಕುಟುಂಬ ಬೀದಿಗೆ ಬರುವಂತಾಗಿದೆ. ದೇಶದ ರಾಜಸ್ಥಾನ, ಪಂಜಾಬ್, ಅಸ್ಸಾಂ, ಹರಿಯಾಣ ಸೇರಿದಂತೆ ಅನೇಕ ರಾಜ್ಯದಲ್ಲಿ ಆರ್ಮಿ, ನೇವಿ, ಏರ್ ಫೋರ್ಸ್ ಸೈನಿಕರಿಗೆ ಸಿಗುವ ಎಲ್ಲ ಸೌಲಭ್ಯಗಳು ನಮ್ಮ ಪ್ಯಾರಾ ಮಿಲಿಟರಿ ಸೈನಿಕರಿಗೆ ಆ ರಾಜ್ಯಗಳು ಕಲ್ಪಿಸಿದ್ದು. ಕರ್ನಾಟಕದಲ್ಲಿ ಮಾತ್ರ ಆ ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ. ದೇಶದಲ್ಲಿ ದಂಗೆ, ಗಲಭೆಗಳು, ಚುನಾವಣೆ ಮುಂತಾದ ಸಂದರ್ಭದಲ್ಲಿ ನಮ್ಮನ್ನು ಬಳಸಿ ಕೊಳ್ಳುವ ಸರ್ಕಾರ ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಮಾಡುವುದು ಸರಿನಾ…? ರಕ್ಷಣಾ ಇಲಾಖೆಗೆ ಬರುವ ಆರ್ಮಿ,ನೇವಿ ಏರ್ ಫೊರ್ಸಗಳು ಎಲ್ಲಾ ಸೌಲಭ್ಯಗಳು ಒದಗಿಸುತ್ತಿದ್ದರೇ ಗೃಹ ಇಲಾಖೆ ಯಡಿಯಲ್ಲಿ ಬರುವ ನಮ್ಮನ್ನು ಸದಾ ಕಡೆ ಗಣಿಸುತ್ತಿರುವುದು ಸರಿಯಲ್ಲ. ಆರ್ಮಿ, ನೇವಿ, ಏರ್ ಫೋರ್ಸ್ ಸೈನಿಕರ ನಿವೃತ್ತಿಯ ನಂತರ ಸೌಲಭ್ಯವನ್ನು ಪಡೆಯಲು ಮತ್ತು ಗೌರವಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಬೋರ್ಡ್ ಸ್ಥಾಪಿಸಿದಂತೆ ನಮಗೂ ಕೂಡ ರಾಜ್ಯ ಸರ್ಕಾರ ವಿಶೇಷ ಬೋರ್ಡನ್ನು ಸ್ಥಾಪಿಸಬೇಕು, ಅವರಿಗೆ ಸಿಗುವ ಎಲ್ಲಾ ಸೌಲಭ್ಯಗಳಂತೆ ಪ್ಯಾರಾ ಮಿಲಿಟರಿ ಸೈನಿಕರಿಗೂ ವೈದ್ಯಕೀಯ, ಶಿಕ್ಷಣ, ಮರು ನೇಮಕಾತಿ, ಪಿಂಚಣಿ, ಕ್ಯಾಂಟೀನ್ ವ್ಯವಸ್ಥೆಯನ್ನು ಕಲ್ಪಿಸ ಬೇಕೆಂದು ಒತ್ತಾಯಿಸಿದರು. ಸರ್ಕಾರದ ಸೌಲಭ್ಯದಿಂದ ವಂಚಿತ ರಾಗಿರುವ ನಿವೃತ್ತಿ ಹೊಂದಿದ ಮತ್ತು ಮರಣ ಹೊಂದಿದ ಹಾಗೂ ಹಾಲಿ ಪ್ಯಾರಾ ಮಿಲಿಟರಿ ಸೈನಿಕರ ಕುಟುಂಬಗಳಿಗೆ ಸರ್ಕಾರದ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ಪ್ಯಾರಾ ಮಿಲಿಟರಿ ವೆಲ್ ಫೇರ್ ಅಸೋಸಿಯೇಷನ್ ಸಂಘವನ್ನು ಸ್ಥಾಪಿಸಲಾಗಿದೆ ಎಂದರು. ಸಂಘದ ಉಪಾಧ್ಯಕ್ಷ ಹೈದರಸಾಬ ಹಳ್ಳಿ, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಉಮಚಗಿ, ರಾಯಪ್ಪ ಹಾದಿಮನಿ, ಹಜರ್‌ಸಾಬ ಪಿಂಜಾರ, ಸೈಯದ್ ಸಾಬ, ಸತ್ಯಪ್ಪ ಕಟಗೂರ, ಅಮರೇಶ ಅಗಸಿ ಮುಂದಿನ, ರಾಮಪ್ಪ ಕಮತಗಿ ಸೇರಿದಂತೆ ಅನೇಕರು ಇದ್ದರು.
ಬಾಕ್ಸ್ ಸುದ್ದಿ:-ಸೌಲಭ್ಯಕ್ಕಾಗಿ ಕಳೆದು ಐದು ವರ್ಷದಿಂದ ಹೋರಾಟ,
ಆರ್ಮಿ, ನೇವಿ, ಏರ್ ಫೋರ್ಸ್ ಸೈನಿಕರಿಗೆ ಸೇವೆ ಯಲ್ಲಿದ್ದಾಗ ಮತ್ತು ನಿವೃತ್ತಿ ಹೊಂದಿದ ಬಳಿಕ ಸಿಗುವ ಸೌಲಭ್ಯಗಳಂತೆ ಪ್ಯಾರಾ ಮಿಲಿಟರಿ ಸೈನಿಕರಿಗೂ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಕಳೆದ ಐದು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇವೆ, ಈ ಹಿಂದೆ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಿದ್ದಾಗ ನಮ್ಮನ್ನು ಅರ್ಮಿ ಬೋರ್ಡಿಗೆ ಸೇರಿಸಲು ಮುಂದಾದಾಗ ಆರ್ಮಿ ಸೈನಿಕರು ಅದನ್ನು ವಿರೋಧಿಸಿದರು. ಅಲ್ಲಿಂದ ನೆನೆಗುದಿಗೆ ಬಿದ್ದಿದೆ. ಸೌಲಭ್ಯಕ್ಕಾಗಿ ದೆಹಲಿ ಜಂತರ ಮಂತರದಲ್ಲಿ ಇಂದಿಗೂ ಹೋರಾಟ ಮಾಡುತ್ತಲೇ ಇದ್ದಾರೆ. ಸರ್ಕಾರ ಪ್ಯಾರಾ ಮಿಲಿಟರಿ ಸೈನಿಕರ ನಿವೃತ್ತಿಯ ನಂತರ ಅವರ ಶೋಚನೀಯ ಬದುಕನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ನಮಗೂ ಎಲ್ಲ ಸೌಲಭ್ಯ ಕಲ್ಪಿಸಬೇಕು. ಹಜರತ್ ಸಾಬ್ ಪಿಂಜಾರ ಹಾಗೂ ರಾಯಪ್ಪ ಹಾದಿಮನಿ. ಮಾಜಿ ಸೈನಿಕರು ಹುನುಗುಂದ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಬಿ.ಬಂಡರಗಲ್ಲ.ಹುನಗುಂದ