‎ಮಾಜಿ ದೇವದಾಸಿ ಮಹಿಳೆಯರ ಬದುಕಿಗೆ ವಿಶೇಷ ಸ್ಪರ್ಶ ನೀಡಿ – ಸರ್ಕಾರಕ್ಕೆ ರೋಣ ತಹಶೀಲ್ದಾರ್ ಮೂಲಕ ಮನವಿ.

ರೋಣ ಏ.18

ದಶಕಗಳ ಕಾಲ ಸಾಮಾಜಿಕ ಶೋಷಣೆಗೆ ಒಳಗಾಗಿ, ಇಂದಿಗೂ ಸಮಾಜದ ಮುಖ್ಯವಾಹಿನಿಗೆ ಬರಲು ಹೋರಾಡುತ್ತಿರುವ ರೋಣ ಮತ್ತು ಗಜೇಂದ್ರಗಡ ತಾಲ್ಲೂಕಿನ ಮಾಜಿ ದೇವದಾಸಿ ಮಹಿಳೆಯರನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರ್ಕಾರಿ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ಇಂದು ಬೃಹತ್ ಮನವಿ ಸಲ್ಲಿಸಲಾಯಿತು.

ವಿಮುಕ್ತಿ ವಿಮುಕ್ತ ದೇವದಾಸಿ ಮಹಿಳಾ ಕರ್ನಾಟಕ ವೇದಿಕೆಯ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ನೂರಾರು ಮಹಿಳೆಯರು, ಕೆ. ನಾಗರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿ ತಮ್ಮ ಅಳಲನ್ನು ತೋಡಿ ಕೊಂಡರು.

ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷರಾದ ಅಭಿಷೇಕ್ ಕೊಪ್ಪದ್ ಸಮಾಜದಲ್ಲಿ ಗೌರವಯುತವಾಗಿ ಬದುಕ ಬೇಕೆಂಬ ಹಂಬಲ ಹೊಂದಿರುವ ಈ ಸಮುದಾಯದ ಮಹಿಳೆಯರು ಇಂದಿಗೂ ಅತ್ಯಂತ ಬಡತನ ಮತ್ತು ಅಸಮಾನತೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇವರನ್ನು ಕೇವಲ ಫಲಾನುಭವಿಗಳನ್ನಾಗಿ ನೋಡದೆ, ಇವರ ಸಾಮಾಜಿಕ ಹಿನ್ನೆಲೆಯನ್ನು ಗಮನಿಸಿ ವಿಶೇಷ ಘಟಕ ಯೋಜನೆ’ (SCP) ಅಡಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಮನೆ ಇಲ್ಲದ ಮಾಜಿ ದೇವದಾಸಿ ಮಹಿಳೆಯರಿಗೆ ಸರ್ಕಾರಿ ಜಮೀನು ಗುರುತಿಸಿ ತಕ್ಷಣವೇ ಹಕ್ಕುಪತ್ರ ನೀಡಬೇಕು ಹಾಗೂ ಬಿಪಿಎಲ್ ಕಾರ್ಡ್ ಮತ್ತು ಮಾಸಾಶನ ವಿಳಂಬವಿಲ್ಲದೆ ತಲುಪಿಸ ಬೇಕು. ಮಾಜಿ ದೇವದಾಸಿ ಮಹಿಳೆಯರ ಮಕ್ಕಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ನೀಡಬೇಕು. ಸರ್ಕಾರಿ ನಿಗಮಗಳ ಮೂಲಕ ದೊರೆಯುವ ಸ್ವಯಂ ಉದ್ಯೋಗ ಸಾಲಗಳಲ್ಲಿ ಶೇ. 100 ರಷ್ಟು ಆದ್ಯತೆ ನೀಡಬೇಕು. ದೇವದಾಸಿ ಸಮುದಾಯದಿಂದ ಬರುವ ಅರ್ಜಿಗಳನ್ನು ಸಾಮಾನ್ಯ ಅರ್ಜಿಗಳಂತೆ ಪರಿಗಣಿಸದೆ, ವಿಶೇಷ ಆದ್ಯತೆಯ ಮೇಲೆ ವಿಲೇವಾರಿ ಮಾಡಲು ಜಿಲ್ಲಾಡಳಿತ ಸೂಚನೆ ನೀಡಬೇಕು.

ಇದೇ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಗೌರವ ಹಿರೇಮನಿ, ಸಿದ್ದವ್ವ ಮಾದರ, ಮಂಜುಳಾ ತೆಗೀಮನಿ, ಯಲ್ಲವ್ವ ತಗ್ಗಿನಮಣಿ, ಮುದುಕವ್ವ ಕೊತಬಾಳ, ಎಲ್ಲಮ್ಮ ಚಲವಾದಿ, ರೇವಪ್ಪ ಕೆಂಗರ ಸೇರಿದಂತೆ ರೋಣ ಮತ್ತು ಗಜೇಂದ್ರಗಡ ತಾಲ್ಲೂಕಿನ ನೂರಾರು ಮಹಿಳೆಯರು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button