ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಿಂದ ಸದೃಢ ರಾಷ್ಟ್ರ ನಿರ್ಮಿಸಲು ಸಾಧ್ಯ – ಯತೀಶ್ ಎಂ ಸಿದ್ದಾಪುರ.
ಚಳ್ಳಕೆರೆ ಮೇ.17

ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಿಂದ ಮಾತ್ರ ಸದೃಢವಾದ ರಾಷ್ಟ್ರವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಹಾಗೂ ಲೇಖಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಾರ್ಥನೆ ಮತ್ತು ಭಜನೆ ನಡೆಸಿ ಕೊಟ್ಟ ಅವರು ಸ್ವಾಮಿ ಪುರುಷೋತ್ತಮಾನಂದಜೀ ಬರೆದಿರುವ “ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣ” ಎಂಬ ವಿಷಯವಾಗಿ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.

ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಲ್ಲಿ ಶಾರೀರಿಕ, ಬೌದ್ಧಿಕ, ನೈತಿಕ ಹಾಗೂ ಆಧ್ಯಾತ್ಮಿಕ ಶಕ್ತಿಗಳು ಪ್ರಧಾನ ಪಾತ್ರ ವಹಿಸುತ್ತವೆ.

ನಮ್ಮ ದಿನನಿತ್ಯದ ಬದುಕಿನಲ್ಲಿ ಈ ನಾಲ್ಕು ಶಕ್ತಿಗಳ ಸಮರ್ಪಕ ಅಳವಡಿಕೆ ಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.

ಚಳ್ಳಕೆರೆಯ ಬಾಪೂಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಂದ ಮೂಡಿಬಂದ ತಾಯಿ ಕಾಳಿಯ ರಂಗೋಲಿ ಚಿತ್ತಾರ 💐🌹
ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಆಧ್ಯಾತ್ಮಿಕ ಶಕ್ತಿಯು ಭದ್ರವಾದ ಅಡಿಪಾಯ ಹಾಕುತ್ತದೆ.
ಆದ್ದರಿಂದ ಇಂದಿನ ಯುವ ಜನಾಂಗ ಆಧ್ಯಾತ್ಮಿಕದ ಬಗ್ಗೆ ಒಲವನ್ನು ಬೆಳೆಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೂಜ್ಯ ಮಾತಾಜೀ ತ್ಯಾಗಮಯೀ ಅವರು ದಿವ್ಯತ್ರಯರಿಗೆ ಮಂಗಳಾರತಿಯನ್ನು ನೆರವೇರಿಸಿದರೆ ಸಂನ್ಯಾಸಿ ಗೀತೆಯ ಗಾಯನ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಗಮನ ಸೆಳೆದ ರಂಗೋಲಿ ಚಿತ್ತಾರ:-
“ಫಲಹಾರಿಣಿ ಕಾಳಿ ಪೂಜೆ” ಯ ಪ್ರಯುಕ್ತ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಬಿಡಿಸಿದ ಕಾಳಿಯ ರಂಗೋಲಿ ಚಿತ್ತಾರ ನೋಡುಗರ ಕಣ್ಮನ ಸೆಳೆಯಿತು.
ತರಗತಿಯಲ್ಲಿ ಹೃತಿಕ್, ಅಭಿಷೇಕ್ ಚಕ್ರವರ್ತಿ, ಲೋಹಿತ್, ಮಾನ್ಯ, ಡಾ, ಭೂಮಿಕಾ, ಜಿ.ಯಶೋಧಾ, ದರ್ಶನ್, ಅಶ್ವಿನಿ, ಪಂಕಜಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

