🚨ಕುಂದಾಪುರದ ವಾರಾಹಿ ನದಿ ತೀರದಲ್ಲಿ ದಲಿತ ಕುಟುಂಬಗಳ ಆಕ್ರಂದನ, ಮಳೆಗಾಲದ ಮುನ್ನವೇ – ಜವರಾಯನ ಜಾಗರಣೆ..!🚨

ಉಡುಪಿ/ಕುಂದಾಪುರ ಮೇ.21

ಪಶ್ಚಿಮ ಘಟ್ಟಗಳಲ್ಲಿ ಮಳೆ ಮುನ್ಸೂಚನೆ ಸಿಗುತ್ತಿದ್ದಂತೆ ಕರಾವಳಿಯ ನದಿ ತೀರದ ಜನರಲ್ಲಿ ನಡುಕ ಶುರುವಾಗುತ್ತದೆ. ಅದರಲ್ಲೂ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ “ಆನಗಳ್ಳಿ ಗ್ರಾಮ ಪಂಚಾಯತ್” ವ್ಯಾಪ್ತಿಯ ವಾರಾಹಿ ನದಿ ತೀರದ ನಿವಾಸಿಗಳ ಸ್ಥಿತಿಯಂತೂ ಹೇಳ ತೀರದಾಗಿದೆ. ಮಳೆಗಾಲದ ಭೀಕರ ಪ್ರವಾಹ ಮತ್ತು ವಾರಾಹಿ ನದಿಯ ಉಗ್ರ ರೂಪಕ್ಕೆ ಇಲ್ಲಿನ “ಕೆಂಪಣ್ಣ ತೋಪು” ಪ್ರದೇಶದ ನಾಲ್ಕು ಪರಿಶಿಷ್ಟ ಜಾತಿಯ ಬಡ ಕುಟುಂಬಗಳು ತಮ್ಮ ಅಸ್ತಿತ್ವವನ್ನೇ ಕಳೆದು ಕೊಳ್ಳುವ ಭೀತಿಯಲ್ಲಿ ದಿನ ದೂಡುತ್ತಿದ್ದಾರೆ.

🔴 ನದಿ ಸವೆತಕ್ಕೆ ಕೊಚ್ಚಿ ಹೋಗುತ್ತಿದೆ ಬಡವರ ಜಮೀನು:-

ಕಣ್ಣೀರಲ್ಲಿ ನಿವಾಸಿಗಳು! ಕುಂದಾಪುರ ತಾಲೂಕಿನ ಆನಗಳ್ಳಿ ಗ್ರಾಮದ ಕೆಂಪಣ್ಣ ತೋಪು ಎಂಬಲ್ಲಿ ವಾರಾಹಿ ನದಿಯ ದಡದಲ್ಲೇ ಈ ನಾಲ್ಕು ಪ.ಜಾತಿ ಕುಟುಂಬಗಳು ತಲೆಮಾರುಗಳಿಂದ ವಾಸಿಸುತ್ತಿವೆ. ಆದರೆ, ಕಳೆದ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಉಂಟಾಗುತ್ತಿರುವ ಭೀಕರ ನೆರೆ ಹಾಗೂ ನದಿಯ ನೀರಿನ ತೀವ್ರ ರಭಸಕ್ಕೆ ದಡವು ನಿರಂತರವಾಗಿ ಸವೆದು (ಕೊಚ್ಚಿ ಹೋಗಿ) ನದಿಯ ಒಡಲು ಸೇರುತ್ತಿದೆ.

📌 ಸ್ಥಳೀಯರ ಅಳಲು:-

“ಈಗಾಗಲೇ ನಮ್ಮ ಜಮೀನಿನ ಅರ್ಧದಷ್ಟು ಭಾಗ ನದಿಗೆ ಆಹುತಿ ಯಾಗಿದೆ. ಈ ಬಾರಿ ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ. ತಕ್ಷಣ ನದಿ ದಡಕ್ಕೆ ತಡೆಗೋಡೆ ಕಟ್ಟದಿದ್ದರೆ, ನಮ್ಮ ಮನೆಗಳು ಮುಂದಿನ ತಿಂಗಳು ನದಿಯ ಪಾಲಾಗುವುದು ಗ್ಯಾರಂಟಿ. ನಾವು ಎಲ್ಲಿಗೆ ಹೋಗಬೇಕು?” ಎಂದು ಸ್ಥಳೀಯ ನಿವಾಸಿ “ಮಂಜಿ ಕೋಂ ರಾಮ” ಕಣ್ಣೀರು ಹಾಕಿದ್ದಾರೆ.

🛑 ಪಂಚಾಯತ್ ಕಣ್ಣಾರೆ ಕಂಡ ಸತ್ಯ, ಆದರೆ ಕೈಯಲ್ಲಿಲ್ಲ ಹಣ..!

ಸ್ಥಳೀಯರ ದೂರಿನ ಮೇರೆಗೆ ಆನಗಳ್ಳಿ ಗ್ರಾಮ ಪಂಚಾಯತ್ ಅಧಿಕಾರಿಗಳು ಇತ್ತೀಚಿಗೆ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರ ಅಳಲು ನೂರಕ್ಕೆ ನೂರು ಸತ್ಯ ಎಂಬುದು ಸಾಬೀತಾಗಿದೆ. ಅಲ್ಲಿನ ನಿವಾಸಿಗಳು ಹಾಗೂ ಅವರ ಆಸ್ತಿ ಪಾಸ್ತಿ ರಕ್ಷಣೆಗೆ ನದಿ ದಡದಲ್ಲಿ ತಕ್ಷಣವೇ “ರಿವೆಟ್‌ಮೆಂಟ್ (ರಕ್ಷಣಾ ಗೋಡೆ) ಅಥವಾ ಬಲಿಷ್ಠ ಕಾಂಕ್ರೀಟ್ ವಾಲ್” ನಿರ್ಮಿಸುವುದು ಅತ್ಯಗತ್ಯ ಮತ್ತು ಅನಿವಾರ್ಯ ಎಂದು ಪಂಚಾಯತ್ ವರದಿಯಲ್ಲೇ ಒಪ್ಪಿ ಕೊಳ್ಳಲಾಗಿದೆ.

ಆದರೆ ಅಸಲಿ ಸಮಸ್ಯೆ ಇರುವುದೇ ಇಲ್ಲಿ! ಈ ಬೃಹತ್ ತಡೆಗೋಡೆ ನಿರ್ಮಾಣಕ್ಕೆ ಅಂದಾಜು “10 ರಿಂದ 15 ಲಕ್ಷ ರೂಪಾಯಿಗಳ” ಮೊತ್ತದ ಅಗತ್ಯವಿದೆ. ಆನಗಳ್ಳಿ ಗ್ರಾಮ ಪಂಚಾಯತ್‌ನ ಸೀಮಿತ ಆರ್ಥಿಕ ಅನುದಾನದಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸಲು ಸಾಧ್ಯವಿಲ್ಲ. ಹೀಗಾಗಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಜಿಲ್ಲೆಯ “ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ” (ದಿನಾಂಕ:-19/05/2026 ರ ಪತ್ರದ ಮೂಲಕ) ತುರ್ತು ಅನುದಾನ ಕೋರಿ ಅಧಿಕೃತ ಪ್ರಸ್ತಾವನೆ ಸಲ್ಲಿಸಿದ್ದಾರೆ.

📢 ಪತ್ರಿಕೆಯ ತೀಕ್ಷ್ಣ ಪ್ರಶ್ನೆ:-

ಅನಾಹುತ ನಡೆದ ಮೇಲಷ್ಟೇ ಎಚ್ಚರ ಗೊಳ್ಳುವುದೇ ಕರಾವಳಿ ಆಡಳಿತವೇ? ಕುಂದಾಪುರ ತಾಲೂಕಿನಲ್ಲಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತವೆ. ಆದರೆ, ಅತ್ಯಂತ ಶೋಷಿತ ಮತ್ತು ಹಿಂದುಳಿದ ವರ್ಗದ ನಾಲ್ಕು ಬಡ ಕುಟುಂಬಗಳ ಜೀವ ರಕ್ಷಣೆಗೆ 15 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಇಲಾಖೆಗಳು ತಡ ಕಾಡುತ್ತಿರುವುದು ದುರ್ದೈವ. ಮಳೆಗಾಲ ಆರಂಭವಾಗಿ ನದಿ ಉಕ್ಕಿ ಹರಿದಾಗ ಅಧಿಕಾರಿಗಳು ಬೋಟ್‌ಗಳಲ್ಲಿ ಬಂದು ಪರಿಶೀಲನೆ ನಡೆಸುವುದಕ್ಕಿಂತ, ಮಳೆ ಬರುವ ಮುನ್ನವೇ ಕಾಮಗಾರಿ ಮಾಡುವುದು ಜಾಣತನವಲ್ಲವೇ..?

ತಕ್ಷಣ ಆಗಬೇಕಾದ ತುರ್ತು ಕ್ರಮಗಳು:-

ಯುದ್ಧೋಪಾದಿ ಕ್ರಮ:-

ಉಡುಪಿ ಜಿಲ್ಲಾಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ತಕ್ಷಣ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸ ಬೇಕು.

ವಿಶೇಷ ಅನುದಾನ:-

ಸಮಾಜ ಕಲ್ಯಾಣ ಇಲಾಖೆಯ ವಿಶೇಷ ನಿಧಿಯಡಿ ಅಂದಾಜು 15 ಲಕ್ಷ ರೂಪಾಯಿಗಳನ್ನು ಯಾವುದೇ ಕಾಗದದ ವಿಳಂಬವಿಲ್ಲದೆ ತಕ್ಷಣವೇ ಮಂಜೂರು ಮಾಡಬೇಕು.

ಸ್ಥಳದಲ್ಲೇ ಕಾಮಗಾರಿ:-

ಮಳೆಗಾಲದ ಅಬ್ಬರ ಜೋರಾಗುವ ಮುನ್ನವೇ ಮುಂದಿನ ಒಂದೆರಡು ವಾರಗಳಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣದ ಪ್ರಾಥಮಿಕ ಕೆಲಸಗಳನ್ನಾದರೂ ಮುಗಿಸಿ ಆ ಬಡ ಕುಟುಂಬಗಳಿಗೆ ನ್ಯಾಯ ಒದಗಿಸ ಬೇಕು.

ಕುಂದಾಪುರ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಈ ಬಡ ದಲಿತ ಕುಟುಂಬಗಳ ಕೂಗಿಗೆ ಬೆಲೆ ಕೊಡುತ್ತದೆಯೇ ಅಥವಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗ ಬೇಕಾಗುತ್ತದೆಯೇ ಎಂಬುದನ್ನು ನಮ್ಮ ಪತ್ರಿಕೆ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button