ಎಸ್.ಎನ್.ಡಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ – ಸ್ಮಾರ್ಟ್ ಕ್ಲಾಸ್ ರೂಂ ಉದ್ಘಾಟನೆ.
ಹುಲ್ಲೂರ ಜು.02

ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ಗ್ರಾಮದ ಎಸ್‌ಎನ್‌ಡಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನೂತನವಾಗಿ ಅಳವಡಿಸಲಾದ ಸ್ಮಾರ್ಟ್ ಕ್ಲಾಸ್ ರೂಂ ಅನ್ನು ತಾಲೂಕು ಅಕ್ಷರ ದಾಸೋಹ ಅಧಿಕಾರಿಗಳಾದ ಎಂ.ಎಂ. ಬೆಳಗಲ್ ಉದ್ಘಾಟಿಸಿದರು.
ಇಟ್ಟಗಿಯ ಷ.ಬ್ರ. ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಸ್ಮಾರ್ಟ್ ಬೋರ್ಡ್‌ಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಂ. ಬೇಳಗಲ್, ಇಂದಿನ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಡಿಜಿಟಲ್ ಶಿಕ್ಷಣ ಸೌಲಭ್ಯಗಳು ದೊರೆಯಬೇಕು. ಬಡ ರೈತರ ಮಕ್ಕಳಿಗೆ ಇಂತಹ ಸೌಲಭ್ಯಗಳನ್ನು ಕಲ್ಪಿಸುವುದು ಶ್ಲಾಘನೀಯ ಕಾರ್ಯವಾಗಿದ್ದು, ಅವರ ಶೈಕ್ಷಣಿಕ ಪ್ರಗತಿಗೆ ಇದು ಸಹಕಾರಿ ಯಾಗಲಿದೆ ಎಂದು ಹೇಳಿದರು.
ಶಾಲಾ ಸಂಸ್ಥೆಯ ಅಧ್ಯಕ್ಷ ಎಂ.ಎಸ್ ಕೊಪ್ಪ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ನವೋದಯ ಹಾಗೂ ಸೈನಿಕ ಶಾಲೆಗಳಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಆಯ್ಕೆಯಾಗ ಬೇಕಾದರೆ ಆಧುನಿಕ ಶಿಕ್ಷಣ ವಿಧಾನಗಳ ಪರಿಚಯ ಅತ್ಯಗತ್ಯ. ಈ ನಿಟ್ಟಿನಲ್ಲಿ ಶಾಲೆಗೆ ಸ್ಮಾರ್ಟ್ ಬೋರ್ಡ್ ಅಳವಡಿಸಿರುವುದು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಸಹಕಾರಿ ಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಡಿ.ಆರ್ ಜೋಷಿ, ಈರಣ್ಣ ಬಡಿಗೇರ ಇದ್ದರು. ಶಾಲೆಯ ಶಿಕ್ಷಕರಾದ ಎಚ್.ಆರ್. ಬಾಗಲಕೋಟ ಕಾರ್ಯಕ್ರಮ ನಿರೂಪಣೆ ಮಾಡಿದರು. ರಮೇಶ್ ಮೆಣಸಿನಕಾಯಿ ವಂದನಾರ್ಪಣೆ ಸಲ್ಲಿಸಿದರು. ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

