ನೆನಪಿನ ಶಕ್ತಿಯ ವೃದ್ಧಿಗೆ ಸ್ವಾಮಿ ವಿವೇಕಾನಂದರ ಪುಸ್ತಕಗಳ ಅಧ್ಯಯನ ಪರಿಹಾರ – ಸಂದೀಪ್.ಎಸ್ ವಶಿಷ್ಠ.
ಚಳ್ಳಕೆರೆ ಜು.27

ಇಂದಿನ ಮಕ್ಕಳು ಎದುರಿಸುತ್ತಿರುವ ಮರೆವಿನ ಸಮಸ್ಯೆಗೆ ಸ್ವಾಮಿ ವಿವೇಕಾನಂದರ ಪುಸ್ತಕಗಳ ಅಧ್ಯಯನ ಸೂಕ್ತ ಪರಿಹಾರ ಎಂದು ಬೆಂಗಳೂರಿನ ಬಸವನ ಗುಡಿಯ ಸ್ವಯಂ ಸೇವಕ ಹಾಗೂ ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್ ನ ಸಿನೀಯರ್ ಇಂಜಿನಿಯರ್ ಸಂದೀಪ್ ಎಸ್ ವಶಿಷ್ಠ ತಿಳಿಸಿದರು.
ನಗರದ ಅಜ್ಜನಗುಡಿ ರಸ್ತೆಯ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳು ಸತ್ಯನಿಷ್ಠೆ, ಸೋದರ ಪ್ರೇಮ, ಶ್ರದ್ಧಾ ಭಕ್ತಿ, ಶಕ್ತಿ, ಸೇವಾಬುದ್ಧಿ, ಕಾರ್ಯಕುಶಲತೆ, ದೇಶ ಪ್ರೇಮ, ಆತ್ಮ ವಿಶ್ವಾಸ, ಧೈರ್ಯಗಳನ್ನು ಬೆಳೆಸಿ ಕೊಂಡು ತಂದೆ-ತಾಯಿ, ಗುರುಗಳನ್ನು, ಅತಿಥಿ, ದೀನಹೀನ ಜನರನ್ನು, ರೋಗಿ ದುಃಖಿಗಳನ್ನು ಮಾನವರೂಪಿ ದೇವರೆಂದು ಕಂಡು ಪೂಜಿಸಬೇಕು. ಸೋಮಾರಿತನ, ಮೂಢನಂಬಿಕೆ, ಕಾಮಕ್ರೋಧ, ಲೋಭ ಮೋಹ, ಮದ ಮಾತ್ಸರ್ಯ, ದುರಹಂಕಾರಗಳನ್ನು ವಿದ್ಯಾರ್ಥಿಗಳಾದವರು ತ್ಯಜಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ವಹಿಸಿ ಆಶೀರ್ವಚನ ನೀಡಿದರು.

ಯತೀಶ್ ಎಂ ಸಿದ್ದಾಪುರ ಅವರಿಂದ ಸ್ವಾಮಿ ವಿವೇಕಾನಂದರ ನಾಮಾವಳಿ, ಸಂನ್ಯಾಸಿ ಗೀತೆಯ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದಿಂದ ಪುಸ್ತಕ ಮಾರಾಟ ಮತ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಪ್ರಮೀಳಾ, ಮುಖ್ಯ ಶಿಕ್ಷಕ ಬಸವರಾಜ್, ಟಿ.ವಿಜಯಮ್ಮ, ಸಹ ಶಿಕ್ಷಕರಾದ ಆರ್, ಗೋವಿಂದ ನಾಯಕ್, ನಾಗೇಶ್, ಸುಧಾಮಣಿ, ಹೃತಿಕ್, ವೀಣಾ, ಪುಷ್ಪಲತಾ, ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
