ವಾರ್ಡ್ ನಂ. 18 ರಲ್ಲಿ 15.ದಿನಗಳಿಂದ ನೀರಿಲ್ಲಾ – ಅಧಿಕಾರಿಗಳ ವಿರುದ್ಧ ಶಫಿ ಚಾವುಶ್ ಆಕ್ರೋಶ.
ಮಾನ್ವಿ ಜು.29

ಪಟ್ಟಣದ ವಾರ್ಡ್ ನಂ. 18 ರಲ್ಲಿ ಅಮೃತ್ 2.0 ಹಾಗೂ ಜೆಜೆಎಂ ಕಾಮಗಾರಿಯ ಅವೈಜ್ಞಾನಿಕ ನಿರ್ವಹಣೆಯಿಂದ ಕಳೆದ 15 ದಿನಗಳಿಂದ ಕುಡಿಯುವ ನೀರು ಸರಬರಾಜು ಸ್ಥಗಿತ ಗೊಂಡಿದ್ದು, ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ರಸ್ತೆಗಳನ್ನು ಅಗೆದು ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೆ ಬಿಟ್ಟಿರುವುದರಿಂದ ಸಾರ್ವಜನಿಕರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯ ಮುಖಂಡ ಶೌಕತ್ ಅಲಿ ಮಾತನಾಡಿ, “ಹೊಸ ಪೈಪ್‌ಲೈನ್ ಅಳವಡಿಸುವ ವೇಳೆ ಈಗಾಗಲೇ ಇರುವ ಕುಡಿಯುವ ನೀರಿನ ಪೈಪ್‌ಗಳಿಗೆ ಹಾನಿ ಯಾಗದಂತೆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಮುಂಚಿತವಾಗಿಯೇ ತಿಳಿಸಿದ್ದೆವು. ಯಾವುದೇ ತೊಂದರೆ ಯಾಗುವುದಿಲ್ಲ, ಶೀಘ್ರದಲ್ಲೇ ಕಾಮಗಾರಿ ಪೂರ್ಣ ಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದರು.

ಆದರೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆದ ಪರಿಣಾಮ ಇಂದು ವಾರ್ಡ್ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆರೋಪಿಸಿದರು.
ವಾರ್ಡ್ ನಿವಾಸಿ ಶಫಿ ಚಾವುಶ್ ಮಾತನಾಡಿ, “ಜೆಜೆಎಂ ಕಾಮಗಾರಿ ವೇಳೆ ನೀರಿನ ಪೈಪ್‌ಗಳನ್ನು ಹಾನಿ ಗೊಳಿಸಿದ್ದಾರೆ. 15 ದಿನಗಳು ಕಳೆದರೂ ಕಾಮಗಾರಿ ಪೂರ್ಣ ಗೊಂಡಿಲ್ಲ. ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳನ್ನು ಪ್ರಶ್ನಿಸಿದರೆ ಸ್ಪಂದಿಸುವ ಬದಲು ನಮಗೇ ಗದರಿಸುತ್ತಿದ್ದಾರೆ. ಕೂಡಲೇ ನೀರು ಸರಬರಾಜು ಪುನರಾರಂಭಿಸಿ ಕಾಮಗಾರಿಯನ್ನು ಪೂರ್ಣ ಗೊಳಿಸಬೇಕು” ಎಂದು ಆಗ್ರಹಿಸಿದರು.

ರಾತ್ರಿ ವೇಳೆ ಬೆಳಕಿನ ಕೊರತೆ ಹಾಗೂ ರಸ್ತೆಯಲ್ಲಿ ಬಿಟ್ಟಿರುವ ಗುಂಡಿಗಳಿಂದ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಆತಂಕದಲ್ಲಿ ಓಡಾಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪುರಸಭೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ರಸ್ತೆ ಕಾಮಗಾರಿಯನ್ನು ಸುರಕ್ಷಿತವಾಗಿ ಪೂರ್ಣ ಗೊಳಿಸುವಂತೆ ವಾರ್ಡ್ ನಿವಾಸಿಗಳು ಪುರಸಭೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

