ಜನವರಿ 24 ಕ್ಕೆ, ವೇತನ ಹೆಚ್ಚಳಕ್ಕಾಗಿ ಸಾರಿಗೆ ನೌಕರರಿಂದ ಧರಣಿ ಸತ್ಯಾಗ್ರಹ….!
ಬೆಂಗಳೂರು (ಜ.23):
ರಾಜ್ಯ ಸಾರಿಗೆ ನೌಕರರು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ,ಆರು ವರ್ಷ ಕಳೆದರೂ ವೇತನ ಹೆಚ್ಚಳ ಮಾಡದೇ ಇರುವುದಕ್ಕೆ ಸರ್ಕಾರದ ವಿರುದ್ಧ ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ ,
ಜನವರಿ 24ರಂದು ನಾಲ್ಕು ನಿಗಮದ ವಿಭಾಗೀಯ ಕಚೇರಿ ಮುಂದೆ ಹಾಗೂ BMTC ನೌಕರರು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಈ ಮೊದಲು ಸಾರಿಗೆ ನೌಕರರು ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2021 ರ ಏಪ್ರಿಲ್‌ನಲ್ಲಿ 15 ದಿನಗಳ ಕಾಲ ಮುಷ್ಕರ ನಡೆಸಿದ್ದರು. ಆದರೂ ಇಲ್ಲಿಯವರೆಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮೀನಾಮೇಷ ಎಣಿಸತ್ತಿರುವುದು ವಿಪರ್ಯಾಸದ ಸಂಗತಿ. ಹೀಗಾಗಿ ಮತ್ತೆ ಧರಣಿ ಸತ್ಯಾಗ್ರಹ ನಡೆಸಲು ನೌಕರರು ನಿರ್ಧರಿಸಿದ್ದಾರೆ.ಸಾವಿರಾರು ನೌಕರರು ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾಗುತ್ತಿರುವುದರಿಂದ ಮಂಗಳವಾರ ಬಸ್ ಸಂಚಾರದಲ್ಲಿ ತುಂಬಾ ವ್ಯತ್ಯಯದ ಸನ್ನಿವೇಶವನ್ನು ನಾವು ಎದುರಿಸಬಹುದು.
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುತ್ತಿದ್ದ ನಿಗಮಗಳು ಆರು ವರ್ಷ ಕಳೆದರೂ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಿಯಮಬದ್ಧವಾಗಿ 2020 ಮಾರ್ಚ್ ನಲ್ಲಿ ವೇತನ ಪರಿಷ್ಕರಣೆ ಆಗಬೇಕಿತ್ತು. ಹೀಗಾಗಿ ನಿಗಮಗಳ ನಿರ್ಧಾರಕ್ಕೆ KSRTC, BMTC, ವಾಯುವ್ಯ ಹಾಗೂ ಕಲ್ಯಾಣ ಸಾರಿಗೆ ನಿಗಮಗಳ 1.30 ಲಕ್ಷ ನೌಕರರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತಸುಬ್ಬರಾವ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.
2016ರಲ್ಲಿ ಶೇ 12.5 ರಷ್ಟು ವೇತನ ಪರಿಷ್ಕರಣೆ ಆಗಿತ್ತು. ಆದರೆ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ನಡೆಸಿ ಒಂದೂವರೆ ವರ್ಷ ಕಳೆದರೂ ಸರ್ಕಾರ ಮಾತ್ರ ಬೇಡಿಕೆ ಈಡೇರಿಸಿಲ್ಲ ಎಂದು ಸಾರಿಗೆ ನೌಕರರು ಆರೋಪಿಸಿದ್ದಾರೆ.