ಹಣ ಕೊಟ್ಟರೆ ಆಂತರಿಕ ಅಂಕಗಳು.
ತರೀಕೆರೆ ಜೂನ್. 7

ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ ಈ ಜಗದಾಗೆ ಕಾಣೋ, ಎಂಬಂತೆ ಅಜ್ಜಂಪುರ ತಾಲೂಕು, ಶಿವನಿ ಹೋಬಳಿ, ತಡಗ ಗ್ರಾಮದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಒಟ್ಟು 26 ವಿದ್ಯಾರ್ಥಿಗಳು ದಾಖಲಾಗಿದ್ದು, 19 ಜನ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ತೆಗೆದುಕೊಂಡಿರುತ್ತಾರೆ ಎಂದು ತಿಳಿದು ಬಂದಿದೆ. ಸರ್ಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ಪಾಠ ಪ್ರವಚನಗಳು ಸಹ ನಡೆಯುತ್ತಿಲ್ಲ. ಮೂರು ಜನ ಅತಿಥಿ ಉಪನ್ಯಾಸಕರಿದ್ದು ಖಾಯಂ ನೌಕರರ, ಅಂದರೆ ಪ್ರಭಾರಿ ಪ್ರಾಚಾರ್ಯರೊಬ್ಬರಿರುತ್ತಾರೆ. ಸರ್ಕಾರದಿಂದ ಪ್ರತಿ ವರ್ಷ ಅಂದಾಜು 4 ಲಕ್ಷ ರೂಗಳು ಅನುದಾನ ಸಂಸ್ಥೆಯ ಅಭಿವೃದ್ಧಿಗೆ ಕೊಡುತ್ತಿದ್ದು,ಸದರಿ ಅನುದಾನವು ದುರುಪಯೋಗವಾಗುತ್ತಿದೆ. ಈ ಹಿಂದೆ ಪ್ರಾಚಾರ್ಯರಾದ ರೆಹಮತ್ ಉಲ್ಲಾ ರವರು ಇದ್ದಾಗ ವಿದ್ಯಾರ್ಥಿಗಳಿಂದ ಆಂತರಿಕ ಅಂಕಗಳಿಗಾಗಿ ಯಾವುದೇ ಲಂಚ ಹಣ ಕೇಳುತ್ತಿರಲಿಲ್ಲ,ಈಗ ಹೊಸದಾಗಿ ಬಂದಿರುವ ಪ್ರಾಚಾರ್ಯರಾದ ವೈ ಎಂ ಶಿವಪ್ಪನವರು ವಿದ್ಯಾರ್ಥಿಗಳು ಐಟಿಐ ಯಲ್ಲಿ ಎಲೆಕ್ಟ್ರಿಷಿಯನ್ ಮತ್ತು ಫಿಟ್ಟರ್ ವಿಭಾಗಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕಾದರೆ ಆಂತರಿಕ ಅಂಕಗಳನ್ನು ನೀಡಲು ಹಣ ಕೇಳುತ್ತಿದ್ದಾರೆ. ಇಲ್ಲವಾದರೆ ಆಂತರಿಕ ಅಂಕಗಳನ್ನು ಕೊಡುವುದಿಲ್ಲ ನಿಮ್ಮನ್ನು ಫೇಲ್ ಮಾಡುತ್ತೇವೆ ಎಂದು ಹೆದರಿಸುವುದಾಗಿ ITI ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹಾಗೂ ಜಂಟಿ ನಿರ್ದೇಶಕರಿಗೂ ಮತ್ತು ಆಯುಕ್ತರಿಗೂ ದೂರು ಅರ್ಜಿ ಸಲ್ಲಿಸಿರುವುದು ಮತ್ತು ವಿಡಿಯೋ ಸಹ ಜಾಲತಾಣದಲ್ಲಿ ಹರಿದಾಡುತ್ತಿದ್ದು ಮಕ್ಕಳಿಗೆ ನ್ಯಾಯ ಸಿಗುವುದೇ?.. ಪ್ರಾಚಾರ್ಯ ವೈ ಎನ್ ಶಿವಪ್ಪ ಕರ್ತವ್ಯ ಸಮಯದಲ್ಲಿ ತರಗತಿಗಳ ಕಡೆ ಗಮನ ಹರಿಸುತ್ತಿಲ್ಲ. ತಾವು ಕೂಡ ತರಗತಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪಗಳು ವಿದ್ಯಾರ್ಥಿಗಳಿಂದ ಕೇಳಿ ಬರುತ್ತಿದ್ದು, ಸಾವಿರಾರು ರೂಪಾಯಿಗಳನ್ನು ಕಟ್ಟಿ ಬಡ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಈ ಸಂಸ್ಥೆಯಲ್ಲಿ ಸೇರಿದ್ದು ಪ್ರಾಂಶುಪಾಲ ಶಿವಪ್ಪರವರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಎಳ್ಳುನೀರು ಬಿಟ್ಟಂತಾಗಿದೆ. ಆದ್ದರಿಂದ ಆಯುಕ್ತರು ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ತತ್ ಕ್ಷಣ ಸಂಸ್ಥೆಗೆ ಭೇಟಿ ನೀಡಿ ಈ ಸಂಬಂಧ ಪರಿಶೀಲನೆ ನಡೆಸಿ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ವಿದ್ಯಾರ್ಥಿಗಳ ಅಳಲಾಗಿದೆ.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ