ನ, 1 ರಂದು ಅದ್ದೂರಿಯಾಗಿ ನಾಡ ಹಬ್ಬ ರಾಜ್ಯೋತ್ಸವನ್ನು ಆಚರಣೆ:ಎಲ್ಲಾ ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸಿ ಸಬೇಕು – ಜಿಲ್ಲಾಧಿಕಾರಿ ದಿವ್ಯ ಪ್ರಭು.
ಧಾರವಾಡ ಅ.16

ಪ್ರತಿ ವರ್ಷದಂತೆ ನವೆಂಬರ್ 1 ರಂದು ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ರಾಜ್ಯೋತ್ಸವ ದಿನದಂದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕಂತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರೀಯ ಧ್ವಜಾರೋಹಣ ನೇರವೆರಿಸಿ, ಸಾರ್ವಜನಿಕರಿಗೆ ರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ ಎಂದು ಅವರು ಹೇಳಿದರು. ನವೆಂಬರ್ 1 ರಂದು ಬೆಳಿಗ್ಗೆ 8.30 ಗಂಟೆಗೆ ಆರ್.ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕರು ಮತ್ತು ಸರ್ಕಾರಿ ನೌಕರರು ಉಪಸ್ಥಿತರಿರಬೇಕು. 8.55 ಕ್ಕೆ ಮುಖ್ಯ ಅತಿಥಿಗಳಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕ್ರೀಡಾಂಗಣಕ್ಕೆ ಆಗಮಿಸುವರು. ನಂತರ ಅವರು ರಾಷ್ಟ್ರ ಧ್ವಜಾರೋಹಣ ನೇರವೆರಿಸಿ, ವಿವಿಧ ದಳಗಳ ವೀಕ್ಷಣೆ ಮಾಡುವರು. ನಂತರ ಸಚಿವರು ಜಿಲ್ಲೆಯ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಸಂದೇಶ ನೀಡುವರು. ಮತ್ತು 9.30 ಗಂಟೆಗೆ ವಿವಿಧ ದಳಗಳಿಂದ ಗೌರವ ರಕ್ಷೆ ಸ್ವೀಕರಿಸುವರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ರಾಜ್ಯೋತ್ಸವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ಆಯೋಜಿಸಿ ಯಶಸ್ವಿ ಗೊಳಿಸಲು ವಿವಿಧ ಇಲಾಖೆಗಳಿಗೆ ಜವಾಬ್ದಾರಿಗಳನ್ನು ವಹಿಸಲಾಗಿದೆ. ಪ್ರತಿ ಇಲಾಖೆಯು ಪರಸ್ಪರ ಸಮನ್ವಯತೆ ಯಿಂದ ಕೆಲಸ ಮಾಡಬೇಕು. ಮತ್ತು ತಮ್ಮ ಇಲಾಖೆಗಳ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ರಾಜ್ಯೋತ್ಸವ ಕಾರ್ಯಕ್ರಮದ ಕವಾಯತ್ತು ಪ್ರದರ್ಶನದಲ್ಲಿ ಹಾಗೂ ಗೌರವ ರಕ್ಷೆ ನೀಡಲು ಆಯ್ಕೆಯಾಗುವ ದಳಗಳಿಗೆ ಅಕ್ಟೋಬರ್ 28 ರಿಂದ 30 ವರೆಗೆ ಆರ್.ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ನೀಡಲಾಗುವುದು. ಉತ್ತಮ ತಂಡಗಳನ್ನು ಅಂತಿಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದ ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುವುದು ಮತ್ತು ಉತ್ತಮ ಪ್ರದರ್ಶನ ನೀಡುವ ದಳಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ದೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು. ಅಕ್ಟೋಬರ್ 31 ರಿಂದ ನವೆಂಬರ್ 2 ರವರೆಗೆ ಧಾರವಾಡ ಜಿಲ್ಲಾ ಕೇಂದ್ರದ ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ಸಾರ್ವಜನಿಕ ಮುಖ್ಯ ವೃತ್ತಗಳಲ್ಲಿ ದೀಪಾಲಾಂಕಾರ ಮಾಡಬೇಕು. ರಾಜ್ಯೋತ್ಸವ ಕಾರ್ಯಕ್ರಮ ಸ್ಥಳದಲ್ಲಿ ಅಗತ್ಯ ಕುಡಿಯುವ ನೀರು, ಶೌಚಾಲಯ ಮತ್ತು ಭಾಗವಹಿಸುವ ವಿದ್ಯಾರ್ಥಿಗಳಿಗೆ ಅಲ್ಪೋಪಹಾರದ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆಗಳು ನಿರ್ವಹಿಸ ಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಚಿವರ ಸಂದೇಶಕ್ಕೆ ಮಾಹಿತಿ: ನವೆಂಬರ್ 01 ರಂದು ಜರುಗುವ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರ ಧ್ವಜಾರೋಹಣದ ನಂತರ ಜಿಲ್ಲೆಯ ಸಾರ್ವಜನಿಕರಿಗೆ ರಾಜ್ಯೋತ್ಸವದ ಸಂದೇಶವನ್ನು ನೀಡುತ್ತಾರೆ. ಈ ಸಂದೇಶಕ್ಕೆ ಅಗತ್ಯವಿರುವ ವಿವಿಧ ಇಲಾಖೆಗಳಲ್ಲಿನ ಪ್ರಗತಿ ವರದಿಯನ್ನು ಆಯಾ ಇಲಾಖಾ ಮುಖ್ಯಸ್ಥರು ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು, ತಮ್ಮ ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿದ, ಇದುವರೆಗೆ ಸಾಧಿಸಿದ ಗುರಿ, ಸಾಧನೆ ಕುರಿತು ಸಂಕ್ಷಿಪ್ತವಾಗಿ ಒಂದು ಪ್ಯಾರಾಗ್ರಾಫ್‍ನಲ್ಲಿ ನುಡಿ ತಂತ್ರಾಂಶದಲ್ಲಿ ಮಾಹಿತಿಯನ್ನು ಅಕ್ಟೋಬರ್ 21, 2024 ರ ಮಧ್ಯಾಹ್ನ 12 ಗಂಟೆಯೊಳಗೆ ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ ಇವರಿಗೆ (ಸಾಫ್ಟ್ ಕಾಪಿ ಮತ್ತು ಹಾರ್ಡ್ ಕಾಪಿ) ಸಲ್ಲಿಸಬೇಕು. ಸಾಫ್ಟ್ ಕಾಪಿಯನ್ನು ಇ-ಮೇಲ್ varthabhavandwd74@gmail.com ಗೆ ಕಳುಹಿಸಬೇಕು. ಮತ್ತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9538076619 ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ವೇದಿಕೆಯಲ್ಲಿ ಇದ್ದರು. ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ. ಎಂ.ಎನ್ ಭೀಮಪ್ಪ, ರಾಜ್ಯ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ಲೋಕೋಪಯೋಗಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಅಗ್ನಿಶಾಮಕ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ