ಸದ್ದು ಮಾಡುತ್ತಿದೆ “ತಾರಕೇಶ್ವರ” ಟ್ರೇಲರ್.
ಬೆಂಗಳೂರು ಅ.30

ಭಕ್ತಿ ಪ್ರಧಾನ ’ತಾರಕೇಶ್ವರ’-‘ಅಸುರ ಕುಲತಿಲಕ’ ಅಡಿ ಬರಹದ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ವೇದಾಂತ ಆಚಾರ್ಯ ಶ್ರೀ ಮಂಜುನಾಥ ಭಾರತಿ ಸ್ವಾಮಿಗಳು ಮೊದಲ ಟ್ರೇಲರ್, ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಎರಡನೇ ಟ್ರೇಲರನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ‍್ಕೆ ವಿಶ್ವನಾಥ್, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಮೂರ್ತಿ, ಕನ್ನಡ ಸಂಘದ ಅಧ್ಯಕ್ಷ ಬಸವರಾಜ ಪಡುಕೋಟೆ ಅನೇಕ ಗಣ್ಯರುಗಳು ಉಪಸ್ಥಿತರಿದ್ದರು. ಪಾತ್ರದ ಕುರಿತು ಗಣೇಶ್‌ರಾವ್ ಕೇಸರ್‌ಕರ್ ಮಾತನಾಡಿ- ನಮ್ಮ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸೆನ್ಸಾರ್‌ನವರು ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸದೆ ’ಯು’ ಪ್ರಮಾಣ ಪತ್ರ ನೀಡಿದ್ದಾರೆ. ನಾನು ಯಾವತ್ತೂ ಹಣಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ. ಉತ್ತಮ ಚಿತ್ರವನ್ನು ಕನ್ನಡಿಗರಿಗೆ ಕೊಡಬೇಕೆಂಂದು ನಿರ್ಮಾಣ ಮಾಡಿದ್ದೇನೆ. ಇಲ್ಲಿ ಬಂದಿರುವ ಅತಿಥಿಗಳು ನನ್ನ ಮೇಲಿನ ಪ್ರೀತಿಯಿಂದ ಬಂದಿದ್ದಾರೆ. ಪೌರಾಣಿಕ ಚಿತ್ರ ಮಾಡುವುದು ಸುಲಭದ ಮಾತಲ್ಲ. ಸೆಟ್‌ನಲ್ಲಿ ಲೈಟಿನ ಕಂಬವು ಕಾಣುವಂತಿಲ್ಲ. ನಿರ್ಮಾಪಕರ ಕಷ್ಟ ಏನೆಂದು ಈಗ ಅರ್ಥವಾಗಿದೆ. ಹೊಸ ಆಲೋಚನೆ ಎನ್ನುವಂತೆ ಈಗಾಗಲೇ ಟಿಕೆಟ್‌ನ್ನು ಮುದ್ರಣ ಮಾಡಿಸಲಾಗಿ, ದರ ನೂರು ರೂಪಾಯಿ ಇರುತ್ತದೆ. ಇದನ್ನು ಖರೀದಿಸಿದವರಿಗೆ ಕರ್ನಾಟಕದ ಯಾವುದೇ ಜಿಲ್ಲೆ, ತಾಲ್ಲೂಕು ಕೇಂದ್ರದಲ್ಲಿ ಸಿನಿಮಾ ವೀಕ್ಷಿಸಬಹುದು. ನಿಮ್ಮೆಲ್ಲರ ಪ್ರೋತ್ಸಾಹ ದಿಂದ ಇಲ್ಲಿಯವರೆಗೂ 333 ಚಿತ್ರಗಳಲ್ಲಿ ನಟಿಸಿದ್ದೇನೆ ಎಂದರು. ನಿರ್ಮಾಪಕರ ಕೋರಿಕೆಗೆ ಮನ್ನಣೆ ನೀಡಿದ ಆಹ್ವಾನಿತರು ಸ್ಥಳದಲ್ಲೇ ಅಂದಾಜು ಐವತ್ತು ಸಾವಿರದಷ್ಟು ಟಿಕೇಟಗಳನ್ನು ಸಗಟು ಖರೀದಿಸಿದರು.

ಹಾಗೂ ಭಾರತೀಯ ಅಂಚೆ ಇಲಾಖೆಯವರು ಹೊರ ತಂದಿರುವ ‘ತಾರಕೇಶ್ವರ’ ಚಿತ್ರ ಇರುವ ಅಂಚೆ ಚೀಟಿಯನ್ನು ಗಣ್ಯ ಮಾನ್ಯರುಗಳು ಅನಾವರಣ ಗೊಳಿಸಿದರು. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಪುರುಷೋತ್ತಮ್ ಓಂಕಾರ್ ಹೇಳುವಂತೆ ಶಿವಪುರಾಣದ ಕಥೆಯಲ್ಲಿ ತಾರಕಾಸುರ ಅಸುರ ಆದರೂ ಕೂಡ, ತಂದೆ ಕೊಂದವನ ಮೇಲೆ ಸೇಡು ತೀರಿಸಿ ಕೊಳ್ಳಲು ತಪ್ಪಸ್ಸು ಮಾಡಿ ತನಗೆ ಸಾವು ಬರ ಬಾರದೆಂದು ಬ್ರಹ್ಮನಿಂದ ವರ ಪಡೆದು ಕೊಳ್ಳುತ್ತಾನೆ. ಮುಂದೆ ಯಾವ ರೀತಿ ಹೋರಾಟ ಮಾಡುತ್ತಾನೆಂದು ಕುತೂಹಲದ ಸನ್ನಿವೇಶ ಗಳೊಂದಿಗೆ ತೋರಿಸಲಾಗಿದೆ. ಗಣೇಶ್‌ರಾವ್ ಕೇಸರ್‌ಕರ್ ರವರು ಶಿವ, ಕುರುಡ, ತಾರಕೇಶ್ವರ ಮತ್ತು ಮಹಾರಾಜ ಹೀಗೆ ನಾಲ್ಕು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಪುತ್ರ ಪ್ರಜ್ವಲ್ ಕೇಸರ್‌ಕರ್ ಇಂದ್ರನಾಗಿ ಕಾಣಿಸಿ ಕೊಂಡಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದಾಗಿ ಮಾಹಿತಿ ಬಿಚ್ಚಿಟ್ಟರು. ರಾಜನ ಮಗಳು, ಶಿವ ಭಕ್ತೆ, ಪಾರ್ವತಿಯಾಗಿ ರೂಪಾಲಿ ನಾಯಕಿ. ತಾರಕೇಶ್ವರನನ್ನು ಸಂಹಾರ ಮಾಡುವ ಬಾಲ ಸುಬ್ರಹ್ಮಣ್ಯನಾಗಿ ಬಾಲ ನಟಿ ಋತುಸ್ಪರ್ಶ ಕಾಣಿಸಿ ಕೊಂಡಿರುವುದು ವಿಶೇಷ. ಇವರೊಂದಿಗೆ ಸುಮಿತ ಪ್ರವೀಣ್, ಅನ್ನಪೂರ್ಣ, ರತಿ ಮನ್ಮಥರಾಗಿ ವಿಕ್ರಂಸೂರಿ-ನಮಿತಾರಾವ್, ಉಳಿದಂತೆ ಶಂಕರಭಟ್,ಶ್ರೀವಿಷ್ಣು, ಜಿಮ್‌ಶಿವು, ಎನ್.ಟಿ ರಾಮಸ್ವಾಮಿ, ಗುರುರಾಜ್, ಹೆಜ್ಜಾಜಿ ಮಹಾದೇವ, ಬಸವರಾಜ ದೇಸಾಯಿ, ವೀರೇಂದ್ರ ಬೆಳ್ಳಿಚುಕ್ಕಿ, ಮಧು ಕಾರ್ತಿಕ್, ಗೀತಾ, ರಾಜೇಶ್ವರಿ ಪಾಂಡೆ, ರಕ್ಷಾಗೌಡ, ರಂಜಿತ, ಶ್ರೀರಾಮ್, ರೂಪ ಮುಂತಾದವರು ಅಭಿನಯಿಸಿದ್ದಾರೆ. ತುಳಜಾಬಾಯಿ, ರೂಪ. ಎಸ್. ದೊಡ್ಮನಿ, ಡಾ, ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ ಸಹ ನಿರ್ಮಾಪಕರಾಗಿದ್ದಾರೆ. ಸಂಗೀತ ರಾಜ್ ಭಾಸ್ಕರ್, ಛಾಯಾಗ್ರಹಣ ಮುತ್ತುರಾಜ್, ಸಂಕಲನ ಅನಿಲ್ ಕುಮಾರ್, ನೃತ್ಯ ಕಪಿಲ್, ಪತ್ರಿಕಾ ಸಂಪರ್ಕ ಚಂದ್ರಶೇಖರ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ನಿರ್ಮಾಣ ನಿರ್ವಹಣೆ ದೀಪಕ್ ಬಾಬು ನಿರ್ವಹಿಸಿದ್ದಾರೆ.
*****
ವರದಿ:
ಡಾ.ಪ್ರಭು ಗಂಜಿಹಾಳ
ಮೊ:9448775346