ಈ ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಅಪಾರ – ಡಾ, ವಿ.ನಾಗೇಂದ್ರ ಪ್ರಸಾದ್.
ಗೋವಾ ಮೇ.28

ಚೇತನ ಪ್ರತಿಷ್ಠಾನ, ಧಾರವಾಡ ವತಿಯಿಂದ ಆಯೋಜಿಸಲಾದ 2 ನೇ. ವಿಶ್ವ ಕನ್ನಡ ಸಮ್ಮೇಳನ–2026 ಪಣಜಿಯ ಮೀರಾಮಾರ್ ಬೀಚ್ ಎದುರಿನ ಗಾಸ್ಫರ್ ಡಯಸ್ ಟೆನಿಸ್ ಕೋರ್ಟ್‌ನಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ನಿಕಟಪೂರ್ವ ವಿಶ್ವ ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ, ರಾಜಶೇಖರ ಮಠಪತಿ ಅವರು ವಿನೂತನವಾಗಿ ಪುಸ್ತಕ ವಾಚನದ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಿಶ್ವ ಕನ್ನಡ ಸಮ್ಮೇಳನವು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಕನ್ನಡಿಗರ ಏಕತೆಯನ್ನು ಉತ್ತೇಜಿಸುವ ಮಹತ್ವದ ಜಾಗತಿಕ ವೇದಿಕೆ ಯಾಗಿದೆ ಎಂದರು. ಕನ್ನಡದ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಇಂತಹ ಸಮ್ಮೇಳನಗಳ ಪಾತ್ರ ಮಹತ್ತರವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಚಿತ್ರಸಾಹಿತಿ, ನಟ, ನಿರ್ದೇಶಕ ಹಾಗೂ ಕವಿರತ್ನ ಡಾ, ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ಮೈಸೂರು ಸಂಸ್ಥಾನದ ದೀರ್ಘಕಾಲದ ಆಡಳಿತಗಾರರಾದ ನಾಲ್ವಡಿ ಕೃಷ್ಣರಾಜ ಒಡೆಯರ ಶಿಕ್ಷಣ, ಕೃಷಿ, ಕೈಗಾರಿಕೆ, ನೀರಾವರಿ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಇಂದಿಗೂ ಸ್ಮರಣೀಯವಾಗಿವೆ ಎಂದರು. ಜನಪರ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳಿಂದ ಅವರು “ರಾಜರ್ಷಿ” ಎಂಬ ಬಿರುದಿಗೆ ಪಾತ್ರರಾಗಿದ್ದರು ಎಂದು ಹೇಳಿದರು.
ಅವರ ಆಡಳಿತಾವಧಿಯಲ್ಲಿ ಮೈಸೂರು ಸಂಸ್ಥಾನ ದೇಶದಲ್ಲೇ ಮಾದರಿ ರಾಜ್ಯವಾಗಿ ಹೊರ ಹೊಮ್ಮಿತು. ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿದ ಅವರು ಅನೇಕ ಶಾಲೆಗಳು, ಕಾಲೇಜುಗಳು ಹಾಗೂ ವಸತಿ ನಿಲಯಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಿದರು. ಮಹಿಳಾ ಶಿಕ್ಷಣಕ್ಕೂ ಆದ್ಯತೆ ನೀಡಿ ಸಮಾಜದಲ್ಲಿ ಸಮಾನತೆ ಬೆಳೆಸಲು ಶ್ರಮಿಸಿದರು ಎಂದು ತಿಳಿಸಿದರು.
ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣಕ್ಕೆ ಅವರ ಬೆಂಬಲ ಮಹತ್ವದ್ದಾಗಿದ್ದು, ಇದರಿಂದ ಸಾವಿರಾರು ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರಕಿತು. ಕೈಗಾರಿಕಾ ಅಭಿವೃದ್ಧಿಗೂ ಉತ್ತೇಜನ ನೀಡಿದ ಅವರು ಅನೇಕ ಕಾರ್ಖಾನೆಗಳು ಹಾಗೂ ಉದ್ಯಮಗಳ ಸ್ಥಾಪನೆಗೆ ಕಾರಣರಾದರು ಎಂದು ಹೇಳಿದರು.
ಸಂಗೀತ, ಸಾಹಿತ್ಯ ಮತ್ತು ಕಲೆಗಳಿಗೆ ಆಶ್ರಯ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರು ಕನ್ನಡ ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಅಭಿವೃದ್ಧಿ ದೃಷ್ಟಿಕೋನ ಇಂದಿಗೂ ಸಮಾಜಕ್ಕೆ ಪ್ರೇರಣೆ ಯಾಗುತ್ತಿದೆ ಎಂದು ಡಾ, ನಾಗೇಂದ್ರ.ಪ್ರಸಾದ್ ಅಭಿಪ್ರಾಯ ಪಟ್ಟರು.

ಚೇತನ ಪ್ರತಿಷ್ಠಾನ, ಧಾರವಾಡದ ಅಧ್ಯಕ್ಷ ಡಾ, ಚಂದ್ರಶೇಖರ ಮಾಡಲಗೇರಿ ಮಾತನಾಡಿ, ಮನೆಯಲ್ಲಿ ಮತ್ತು ಸಮಾಜದಲ್ಲಿ ಕನ್ನಡದಲ್ಲಿ ಮಾತನಾಡುವ ಅಭ್ಯಾಸ ಬೆಳೆಸಬೇಕು ಎಂದರು. ಮಕ್ಕಳಿಗೆ ಕನ್ನಡ ಓದು-ಬರಹ ಕಲಿಸುವುದು, ಕನ್ನಡ ಪುಸ್ತಕಗಳು, ಪತ್ರಿಕೆಗಳು ಹಾಗೂ ಸಾಹಿತ್ಯ ಓದುವ ಅಭ್ಯಾಸ ರೂಢಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಕನ್ನಡ ಮಾಧ್ಯಮ, ನಾಟಕ ಹಾಗೂ ಸಿನಿಮಾಗಳಿಗೆ ಪ್ರೋತ್ಸಾಹ ನೀಡಬೇಕು. ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಬಳಕೆ ಹೆಚ್ಚಿಸಬೇಕು. ಕನ್ನಡ ಹಬ್ಬಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯುವ ಜನತೆ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಇಂದಿನ ಯುವ ಜನತೆ ಸಾಮಾಜಿಕ ಜಾಲ ತಾಣಗಳಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸಬೇಕು. ತಂತ್ರಜ್ಞಾನದಲ್ಲಿ ಕನ್ನಡಕ್ಕೆ ಆದ್ಯತೆ ನೀಡಿದಾಗ ಮಾತ್ರ ಭಾಷೆಯ ಬೆಳವಣಿಗೆ ಸಾಧ್ಯ. “ಕನ್ನಡ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ” ಎಂಬುದು ಸತ್ಯವಾಗಿದ್ದು, ಕನ್ನಡವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುಟಾಣಿ ಕವಿ ಮೊಹಮ್ಮದ್ ಅರ್ಶ್ ಮಾಹಿರ್ ಅವರ ‘ಅಮ್ಮನ ಕನಸು’ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ಅಧ್ಯಕ್ಷ ಸಿದ್ದಣ್ಣ ಮೇಟಿ ಲೋಕಾರ್ಪಣೆ ಗೊಳಿಸಿದರು.
ಕುಮಾರಿ ಅಕ್ಷರ ರೆಡ್ಡಿ ತಂಡದ ರೂಪಕ ನೃತ್ಯ, ಜೀ ಕನ್ನಡ ಸರಿಗಮಪ ಖ್ಯಾತಿಯ ರೇವಣಸಿದ್ಧ ಪುಂಡಲಿಕ ಪುಲಾರಿ ಅವರ ಗಾಯನ, ಕದಳಿ ವೇದಿಕೆ ಮತ್ತು ಬನಶಂಕರಿ ಮಹಿಳಾ ತಂಡ ಕೊಟ್ಟೂರು ಇವರಿಂದ ಗೀತ ಗಾಯನ, ಮಾನ್ವಿ ಮಂದಾರ್ತಿ ಅವರ ಯಕ್ಷಗಾನ ಪ್ರದರ್ಶನ ಹಾಗೂ ವಿದ್ಯಾ ದೇವಗಿರಿ ಅವರಿಂದ ಕನ್ನಡ ಚಿತ್ರ ಗೀತೆಗಳ ಗಾಯನ ನಡೆಯಿತು.
ಎಲ್.ಐ ಲಕ್ಕಮ್ಮನವರ್, ಅಣ್ಣಪ್ಪ ಮೇಟಿಗೌಡ, ಪ್ರಭು ರಂಗಾಪೂರ, ಕವಿತಾ ಕವಲಗೇರಿ, ಪರ್ವಿನ್ ಬಾನು, ಬಿ. ರಂಗಸ್ವಾಮಿ, ಉಷಾಲತಾ ಶೆಟ್ಟಿ, ಎಂ. ಮಲ್ಲಿಕಾರ್ಜುನಯ್ಯ, ಆರಾಧನಾ ಬಣಕಾರ, ರಾಜೇಂದ್ರಕುಮಾರ ಮಠ, ಅನಿಲ್ ಸನದಿ, ಸುಜಾತ ಮಠ, ಜ್ಯೋತಿ ರಾಯ್ಕರ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರ್ಥನೆಯನ್ನು ವಿದ್ಯಾ ಆರ್. ದೇವಗಿರಿ ನೆರವೇರಿಸಿದರು. ಎಲ್ಲ ಅತಿಥಿ ಗಣ್ಯರಿಗೆ ಕನ್ನಡ ಶಾಲು ಹೊದಿಸಿ ವೀರೇಶ್ ಕೆ. ಎಸ್. ಸ್ವಾಗತಿಸಿ ಕೊಂಡರು.
ವಿಶ್ವ ಕನ್ನಡತಿ ಪ್ರಶಸ್ತಿ, ವಿಶ್ವ ಕನ್ನಡಿಗ ಪ್ರಶಸ್ತಿ ಪುರಸ್ಕೃತರು, ವಿವಿಧ ಕನ್ನಡಪರ ಸಂಘಟನೆಗಳ ಪ್ರತಿ ನಿಧಿಗಳು, ಸಮಾಜ ಸೇವಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್.ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ
