ವರ ನಟ ಡಾ, ರಾಜ್ ಕುಮಾರ್ ಯುಗ ಪುರುಷ..! – ಕವಿ ಡಾ, ಜಯಪ್ಪ ಹೊನ್ನಾಳಿ.
ಮೈಸೂರು ಮೇ.28

ಕನ್ನಡಿಗರ ಆರಾಧ್ಯ ದೈವ, ಕರುನಾಡಿನ ಸಾಂಸ್ಕೃತಿಕ ರಾಯಭಾರಿ, ನಾಡೋಜ, ನಟ ಸಾರ್ವಭೌಮ, ಕನ್ನಡ ಸಿನಿಮಾ ಲೋಕದ ಧ್ರುವತಾರೆ, ಕನ್ನಡದ ಅಸ್ಮಿತೆ, ಕನ್ನಡತ್ವದ ರೂಪಕ, ಕರುನಾಡಿನ ಯುಗ ಪುರುಷ, ಪದ್ಮಭೂಷಣ ಡಾ, ರಾಜ್ ಕುಮಾರ್ ಎಂದು ಕವಿ ಡಾ, ಜಯಪ್ಪ ಹೊನ್ನಾಳಿ ಬಣ್ಣಿಸಿದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆಯೇ ಡಾ, ರಾಜ್ ಕುಮಾರ್ ಮಾಡಿ ಸೈ ಎನ್ನಿಸಿ ಕೊಳ್ಳದಿರುವ ಪಾತ್ರಗಳಿಲ್ಲ, ಕನ್ನಡಿಗರು ಹೃನ್ಮನ ಪೂರ್ವಕವಾಗಿ ಹಾಗೂ ಆತ್ಮ ಪೂರ್ವಕವಾಗಿ ಅಣ್ಣಾ ಎಂದು ಇದು ವರೆಗೂ ಕರೆದದ್ದು, ಅಂದು ಪ್ರಧಾನಿಯಾಗಿದ್ದರೂ ಎನಗಿಂತ ಕಿರಿಯರಿಲ್ಲ ಎಂದ ೧೨ ನೇ ಶತಮಾನದ ಬಸವಣ್ಣನವರನ್ನು, ಸತತ ಐದು ದಶಕ ಅನನ್ಯವೂ ಅಪೂರ್ವವೂ ಆದ ಅಭಿನಯದಿಂದ ವರ ನಟನೆನಿಸಿ, ಉತ್ತುಂಗದಲ್ಲಿದ್ದೂ ನಯ ವಿನಯ ಮುಗ್ಧತೆಗಳೇ ಮೈವೆತ್ತಂತಿದ್ದ ೨೧ ನೇ. ಶತಮಾನದ ಡಾ, ರಾಜಕುಮಾರ್ ಅವರನ್ನು ಮಾತ್ರ ಎಂದರು.
ಮೈಸೂರಿನ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನವು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಏರ್ಪಡಿಸಿದ್ದ “ರಾಜಕುಮಾರ ಜನ್ಮ ದಿನೋತ್ಸವ” ಹಾಗೂ “ಪ್ರಶಸ್ತಿ ಪ್ರದಾನ ಸಮಾರಂಭ” ದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತಾಡುತ್ತಿದ್ದರು.
ಗೌರವ ಡಾಕ್ಟರೇಟ್ ಪದವಿಯಿಂದ ಕೆಲವರ ಗೌರವ ಹೆಚ್ಚಾಗಿರಬಹುದು, ಆದರೆ ಹಲವರಿಂದ ಆ ಪದವಿಯ ಗೌರವ ಕಡಿಮೆಯಾಗಿದೆ, ವಿಶೇಷವೆಂದರೆ ಆ ಪದವಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದ ಗೌರವವನ್ನು ಅಕ್ಷರಶಃ ಹೆಚ್ಚಿಸಿದವರು ಡಾ, ರಾಜ್ ಕುಮಾರ್. ಅಭಿಮಾನಿಗಳನ್ನು ದೇವರೆಂದು ಕರೆದ ಈ ದೇವತಾ ಮನುಷ್ಯ ಕನ್ನಡಿಗರ ಪಾಲಿಗೆ ಎಂದೆಂದಿಗೂ ಒಂದು ಆದರ್ಶ, ಬಡತನದ ಕಾರಣದಿಂದ ನಾಲ್ಕನೇ ತರಗತಿಗೇ ಓದು ನಿಲ್ಲಿಸಿ, ಜಗತ್ತೇ ಬೆರಗಾಗುವಂತೆ ಹಂಪಿ ವಿ.ವಿ ಯಿಂದ ನಾಡೋಜ ಪ್ರಶಸ್ತಿ ಪಡೆಯುವಂತೆ ಬೆಳೆದು, ನಿರಕ್ಷರ ಕುಕ್ಷಿಗಳ ಜೊತೆಗೆ ಅಕ್ಷರವಂತರಿಗೂ ಸುಸಂಸ್ಕಾರಗಳನ್ನು ತಮ್ಮ ಬದುಕಿನ ಮೂಲಕವೇ ತೋರಿಸಿ ಕಲಿಸಿ ಕೊಟ್ಟರು.
ಸಮಾಜಕ್ಕೆ ತಪ್ಪು ಸಂದೇಶ ಕೊಡುವ ಯಾವ ಚಿತ್ರಗಳನ್ನೂ ಒಪ್ಪಿಕೊಳ್ಳದೆ, ಆದ ಅವಮಾನ ಅಪಮಾನಗಳ ನಂಜನ್ನೆಲ್ಲ ನುಂಗಿ ನಂಜುಂಡೇಶ್ವರನಾದರು, ಬಂಗಾರದ ಮನುಷ್ಯನೆನಿಸಿದರು, ನಾಡು ನುಡಿ ನೆಲ ಜಲಗಳಿಗೆ ಸಮಸ್ಯೆ ಬಂದಾಗ, ಕನ್ನಡಮ್ಮನ ಮೊದಲ ಮಗನಾಗಿ ಹೋರಾಡಿದರು ಎಂದರು.
ಕೆಂಟಕಿ ಕರ್ನಲ್ ಪ್ರಶಸ್ತಿ ಪಡೆದು ತಮ್ಮೊಂದಿಗೆ ಕನ್ನಡ ಚಿತ್ರರಂಗವನ್ನೂ ಬೆಳೆಸಿದ ಈ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ತಮ್ಮ ದಣಿವರಿಯದ ಶ್ರಮದಿಂದ ಯಾರೂ ಪಡೆಯಲಾಗದ ಯಶಸ್ಸನ್ನು ಪಡೆದರು, ತಮ್ಮ ಸಿನಿಮಾಗಳ ಗೆಲುವನ್ನು ಎಲ್ಲರಿಗೂ ಸಮರ್ಪಿಸಿ, ನಿರ್ಮಾಪಕರನ್ನು ಅನ್ನದಾತರೆಂತಲೂ, ನಿರ್ದೇಶಕರನ್ನು ಗುರುಗಳೆಂತಲೂ ಕರೆದು, ಮುತ್ತು ರಾಜನನ್ನು ರಾಜ ಕುಮಾರನ ಮಾಡಿದವರು ನೀವೇ, “ನೀವೆನಗೆ ಅಭಿಮಾನಿಗಳಲ್ಲ, ಅಭಿಮಾನಿ ದೇವತೆಗಳು” ಎಂದಾಗ ನಾಡು ಮಂತ್ರ ಮುಗ್ಧವಾಗಿ ಚಪ್ಪಾಳೆ ತಟ್ಟಿ, ಇವರನ್ನು ತಮ್ಮ ಮನೆಯ ಮಗನನ್ನಾಗಿಸಿ ಕೊಂಡಿತು, ಏಕೆಂದರೆ ಅವರಲ್ಲಿ ಯಾವುದೇ ಬೂಟಾಟಿಕೆ ಯಾಗಲಿ, ಮಾತು ಮನಸುಗಳ ನಡುವೆ ಪರದೆ ಯಾಗಲಿ ಇರಲಿಲ್ಲ, ಕೇವಲ ಮುಗ್ಧತೆ ಯೊಂದಿಗೆ ಸಾಚಾತನ ಮತ್ತು ಪ್ರಾಮಾಣಿಕತೆಯಿತ್ತು, ಕೊನೆಯ ವರೆಗೂ ಮಗು ತನವನ್ನೂ, ಸಂತ ಮನೋಭಾವವನ್ನು ತಮ್ಮೆದೆಯಲ್ಲಿ ಜೋಪಾನ ಮಾಡಿಕೊಂಡ ಕಾರಣದಿಂದಲೇ ಅವರು ಮುಗಿಲೆತ್ತರಕ್ಕೆ ಬೆಳೆಯಲು ಸಾಧ್ಯವಾಯಿತು, ಅವರಿಗೆ ಭಾರತ ರತ್ನ ಬರಲಿಲ್ಲವೆಂಬ ಕೊರಗು ಕನ್ನಡಿಗರೆಲ್ಲರಿಗೂ ಇದ್ದೇ ಇದೆ, ಮರಣೋತ್ತರವಾಗಿಯಾದರೂ ಭಾರತ ಸರ್ಕಾರ, ಅವರಿಗೆ “ಭಾರತ ರತ್ನ ಪ್ರಶಸ್ತಿ” ಯನ್ನು ನೀಡಬೇಕು, ಆಗ ಅದರ ಬೆಲೆಯೂ ಹೆಚ್ಚಾಗಲಿದೆ ಎಂದ ಅವರು, ಡಾ, ರಾಜ ಕುಮಾರ್ ಅವರ ಬಗ್ಗೆ ನಾನೆಷ್ಟೇ ಮಾತಾಡಿದರೂ ಕವಿ ಕೆ.ಎಸ್.ನ. ಒಂದೆಡೆ ಹೇಳುವಂತೆ, “ಸಿಕ್ಕಿದ್ದು ಚುಕ್ಕೆ: ಮಿಕ್ಕಿದ್ದು ಆಕಾಶ” ಎಂದರು.

ಡಾ, ರಾಜ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹಿರಿಯ ಸಮಾಜ ಸೇವಕರಾದ ಡಾ, ಕೆ.ರಘುರಾಂ ವಾಜಪೇಯಿ ಸಮಾರಂಭ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅರಸು ಜಾಗೃತಿ ಚಾರಿಟಬಲ್ ಟ್ರಸ್ಟ್ ಗೌರವ ಕಾರ್ಯದರ್ಶಿಗಳಾದ ಹಿರಿಯ ಚುಟುಕು ಸಾಹಿತಿ ಡಾ, ಎಂ.ಜಿ.ಆರ್. ಅರಸ್ ಹಾಗೂ ಸಿನಿಮಾ ನಿರ್ಮಾಪಕರೂ ಮೈಸೂರು ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷರೂ ಆದ ಲಯನ್ ಗೋಲ್ಡನ್ ಟಿ.ಸುರೇಶ್ ಭಾಗವಹಿಸಿದ್ದರು.
ಸಾಧಕರಾದ, ಶಿಕ್ಷಣ ಕ್ಷೇತ್ರದ ಸುಮ, ಜಾನಪದ ಕ್ಷೇತ್ರದ ಅಂಬಳೆ ಶಿವಣ್ಣ, ಆರೋಗ್ಯ ಸೇವಾಕ್ಷೇತ್ರದ ನಟರಾಜು ಎಂ., ಸಂಘಟನೆ ಹಾಗೂ ಸಮಾಜ ಸೇವಾಕ್ಷೇತ್ರದ ಮಲ್ಲಿಕಾ ಮಹದೇವಸ್ವಾಮಿ, ಕಲಾಕ್ಷೇತ್ರದ ಡಾ, ರಾಜ್ ಕಂಠಸಿರಿಯ ಖ್ಯಾತ ಗಾಯಕ ಜಯರಾಮರಾಜು ಹಾಗೂ ಸಮಾಜ ಸೇವಾಕ್ಷೇತ್ರದ ಕೆ. ಪಿ. ಯೋಗೇಶ್ ಅವರುಗಳಿಗೆ “ಡಾ, ರಾಜ್ ಕುಮಾರ್ ಕಲಾ ಭೂಷಣ ಪ್ರಶಸ್ತಿ” ಪ್ರಧಾನ ಮಾಡಲಾಯಿತು.
ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜೇಂದ್ರ ಸ್ವಾಮಿ ಎಲ್ಲರನ್ನೂ ಸ್ವಾಗತಿಸಿ, ನಿರೂಪಣೆ ಮಾಡಿದರು. ಕುಮಾರಿ ಬಾನುದೀಪ ಎಂ.ಎಸ್. ಪ್ರಾರ್ಥನೆ ಮಾಡಿದರು. ಕ.ಸಾ.ಪ ಪ್ರಕಾಶ್, ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಸಾಹಿತಿ ರಂಗನಾಥ ಮೈಸೂರು, ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಆರ್.ಕೆ.ಸ್ವಾಮಿ, ಲೇಖಕಿ ಸುಮಾ ರಾವ್ ಮುಂತಾದವರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್.ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

