“ಮಹಾ ಕುಂಭಮೇಳ ಯಾತ್ರೆಯ ಅಮೃತಾನುಭವ”…..

ನಮ್ಮ ಸನಾತನ ಧರ್ಮದ ಪರಂಪರೆ ಬಹಳ ಮಹತ್ವ ಪೂರ್ಣವಾದದ್ದು, ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಇಡೀ ವಿಶ್ವದ ಎಲ್ಲ ಧರ್ಮಗಳಿಗೂ ಮುಕುಟ ಪ್ರಾಯವಾದ್ದು ಮತ್ತು ಪ್ರಾಚೀನವಾದದ್ದು ಆದರೆ ಅಷ್ಟೇ ನಿತ್ಯ ನೂತನವಾಗಿದೆ. ಇಂತಹ ಪರಂಪರೆ ಅಥವಾ ಧರ್ಮದಲ್ಲಿ ಹುಟ್ಟಿದ ನಾವೆಲ್ಲರೂ ನಿಜಕ್ಕೂ ಧನ್ಯರು. ಈ ಪರಂಪರೆಯ ಸರಪಳಿಯಲ್ಲಿ ಬರುವ ಅನೇಕ ಅದ್ಭುತಗಳು, ಆಚರಣೆಗಳಲ್ಲಿ ಕುಂಭ ಮೇಳವೂ ಒಂದು. ದೇವ ದಾನವರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡಿದಾಗ ನಡೆದ ಪ್ರಕ್ರಿಯೆಯಲ್ಲಿ ನಾಲ್ಕು ಅಮೃತ ಬಿಂದುಗಳು ಭೂಮಿಯ ಮೇಲೆ ಬಿದ್ದವು. ಆ ಅಮೃತ ಬಿಂದುಗಳು ಬಿದ್ದ ನಾಲ್ಕು ಪವಿತ್ರ ಸ್ಥಳಗಳೆಂದರೆ ಪ್ರಯಾಗ, ಹರಿದ್ವಾರ, ಉಜ್ಜೈನಿ ಮತ್ತು ನಾಸಿಕ್ ಗಳಾಗಿವೆ. ಈ ದಿವ್ಯವಾದ ಕ್ಷೇತ್ರಗಳಲ್ಲಿ ಆರು ತಿಂಗಳು, ಒಂದು ವರ್ಷ, ಹನ್ನೆರಡು ವರ್ಷ ಗಳಿಗೊಮ್ಮೆ ಒಂದು ಕುಂಭಮೇಳ ನಡೆಯುತ್ತದೆ. ಆದರೆ ಈ ಬಾರಿಯ ಕುಂಭ ಮೇಳದ ವಿಶೇಷತೆ ಎಂದರೆ ಈ ಪರ್ವ ಕಾಲ ಬರುವುದು 144 ವರ್ಷ ಗಳಿಗೊಮ್ಮೆ ಮಾತ್ರ. ಇದನ್ನು ‘ಮಹಾ ಕುಂಭಮೇಳ’ ಎಂದು ಕರೆಯಲಾಗುತ್ತದೆ. ಇಂತಹ ಮಹಾ ಪರ್ವ ನಡೆಯುತ್ತಿರುವ ಈ ಸಂದರ್ಭಕ್ಕೆ ಸಾಕ್ಷೀ ಭೂತರಾಗಿರುವುದು ನಮ್ಮೆಲ್ಲರ ಪರಮ ಸೌಭಾಗ್ಯ. ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಈ ಮಹಾ ಕುಂಭ ಮೇಳದಲ್ಲಿ ಮಿಂದು ಪುನೀತರಾಗಲು ನಾವು ಆರು ಜನ ಬೆಂಗಳೂರಿನಿಂದ ಗೋರಕಪುರಕ್ಕೆ ಹೋದೆವು. ಅಲ್ಲಿಂದ ಶ್ರೀರಾಮ ಜನ್ಮಭೂಮಿ ಅಯೋಧ್ಯೆಗೆ ತೆರಳಿದೆವು. ಎಲ್ಲೆಲ್ಲಿ ನೋಡಿದರೂ ಅಪಾರವಾದಂತಹ ಜನ ಸಾಗರ. ಶ್ರೀರಾಮನ ದರ್ಶನ ಪಡೆಯಲು ಮಂದಿರದ ಪ್ರಾಂಗಣಕ್ಕೆ ಕಾಲಿಟ್ಟಾಗ ಈ ಅಪಾರ ಜನಸ್ತೋಮದ ಮಧ್ಯೆ ಹೇಗಪ್ಪಾ ಅವನ ದರ್ಶನ ಪಡೆಯುವುದು ಎಂದು ಅನಿಸಿದರೂ ಭಕ್ತರ “ಜೈ ಶ್ರೀರಾಮ್” ಎಂಬ ಜಯಘೋಷ ನಮ್ಮಲ್ಲಿ ಉತ್ಸಾಹ ಮತ್ತು ಶಕ್ತಿಯನ್ನು ತುಂಬಿತು. ಶ್ರೀಮಾತೆ ಶಾರದಾ ದೇವಿ ಯವರ ಕೃಪೆಯಿಂದ ಶ್ರೀರಾಮಲಾಲ್ಲನ ಎರಡು ಬಾರಿ ದರ್ಶಿಸಿದೆವು. ಅವನ ನಯನ ಮನೋಹರವಾದ ರೂಪವನ್ನು ವರ್ಣಿಸಲು ಪದಗಳೇ ಇಲ್ಲ. ಕೇವಲ ನೋಡಿಯೇ ಆನಂದ ಅನುಭವಿಸಬೇಕು. ಶ್ರೀರಾಮ ಮಂದಿರದ ಶ್ರೀಮಂತವಾದ ಶಿಲ್ಪ ಕಲೆ, ಪ್ರಕಾರಗಳು, ಸ್ತಂಭಗಳು ನಮ್ಮ ಚರಿತ್ರೆಯ ವೈಭವವನ್ನು ಸಾರುತ್ತವೆ. ಶ್ರೀರಾಮನ ದರ್ಶನ ಪಡೆದು ಪ್ರಯಾಗಕ್ಕೆ ಟ್ಯಾಕ್ಸಿ ಮೂಲಕ ಪ್ರಯಾಣ ಬೆಳೆಸಿದೆವು. ರಾತ್ರಿ ಸುಮಾರು 9:30 ಕ್ಕೆ ಅಯೋಧ್ಯಾ ನಗರದಿಂದ ಹೊರಟು ಮರುದಿನ ಬೆಳಗಿನ ಜಾವ 2.30 ಕ್ಕೆ ಪ್ರಯಾಗ ತಲುಪಿದೆವು.

ಪ್ರಯಾಗಕ್ಕೆ ತಲುಪಿದ ಕ್ಷಣವೇ ನಮಗೆ ಮೊದಲು ಕಾಣಿಸಿದ್ದು ಅಲ್ಲಿ ವ್ಯವಸ್ಥೆ ಮಾಡಲಾಗಿದ್ದ ವಿದ್ಯುತ್ ದೀಪಗಳು, ಅವು ಸಾಲಾಗಿ ನಿಂತು ಬರುತ್ತಿರುವ ಭಕ್ತರನ್ನು ಸ್ವಾಗತಿಸುತ್ತಿವೆ ಏನೂ ಎನ್ನುವ ರೀತಿಯಲ್ಲಿ ಭಾಸವಾಯಿತು. ಮಹಾ ಕುಂಭ ಮೇಳಕ್ಕೆ ಹೋಗಿ ಬಂದವರ ಅನುಭವಗಳನ್ನು ಕೇಳಿದ್ದ ನಮಗೆ ಮನಸ್ಸಿನಲ್ಲಿ ಸ್ವಲ್ಪ ಅಳುಕು ಇಲ್ಲದೇ ಇರಲಿಲ್ಲ.ಆದರೆ ದಿವ್ಯತ್ರಯರ ಕೃಪಾಶೀರ್ವಾದ ದಿಂದ ನಾವೆಲ್ಲರೂ ಟ್ಯಾಕ್ಸಿಯಲ್ಲೇ 20 ನೇ ಸೆಕ್ಟರ್ ವರೆಗೂ ಅಂದರೆ ಸಂಗಮದ ವರೆಗೂ ಹೋದೆವು. ಆ ಬೆಳಗಿನ ಜಾವದ ಸಮಯದ ಪವಿತ್ರವಾದ ಭೂಮಿ, ಸಾಧು ಸಂತರ ಭಕ್ತರ ಪಾದ ಧೂಳಿಯ ಘಮ, ಬಾನಿನಲ್ಲಿ ಒಂದು ಕಡೆ ಅಸ್ತಮಿಸಲು ಸಜ್ಜಾಗಿದ್ದ ಚಂದ್ರ-ಉದಯಿಸಲು ಅಣಿಯಾಗುತ್ತಿರುವ ಸೂರ್ಯ ಪ್ರಕೃತಿಯನ್ನು ಆಸ್ವಾದಿಸುವಂತೆ ಮಾಡಿದವು. ಥರ ಗುಟ್ಟುವ ಚಳಿಯಲ್ಲಿ ಬಾಲುನ್ ಬ್ರಿಡ್ಜ್ ಮೇಲೆ ಸ್ವಲ್ಪ ದೂರ ನಡೆದುಕೊಂಡು ಸಂಗಮದ ಬಳಿ ಬಂದೆವು. ಸಾವಿರಾರು ಕಿಲೋ ಮೀಟರ್ ದೂರದಿಂದ ಯಾವ ಪುಣ್ಯ ಸ್ನಾನಕ್ಕಾಗಿ ಬಂದಿದದ್ದೆವೂ ಆ ಕ್ಷಣ ಬಂದೇ ಬಿಟ್ಟಿತು. ಸರಿ ಸುಮಾರು ಬೆಳಗ್ಗೆ 3:30 ಕ್ಕೆ ಪರಮ ಪಾವನವಾದ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಜಲದಲ್ಲಿ ಮಿಂದೆದ್ದೆವು. ಭಕ್ತಿಯ ಪುಳಕದಲ್ಲಿ ನದಿ ನೀರಿನ ತಂಪು-ಚಳಿ ಹೊರಟು ಹೋಯಿತು. ಸಂಗಮದಲ್ಲಿ ಮುಳಿಗಿದಾಗ ಶ್ರೀರಾಮಕೃಷ್ಣರ ನೇರಸಂನ್ಯಾಸಿ ಶಿಷ್ಯರಾದ ಸ್ವಾಮಿ ವಿಜ್ಞಾನಾನಂದಜೀ ಅವರಿಗೆ ಪ್ರಯಾಗದಲ್ಲಿ ಆದಂತಹ ದರ್ಶನ ನಮ್ಮ ಸ್ಮೃತಿ ಪಟಲದಲ್ಲಿ ಹಾದು ಹೋಯಿತು. ಅಲ್ಲಿ ಮಾಡಿದ್ದಂತಹ ವ್ಯವಸ್ಥೆ ಅತ್ಯಂತ ಉನ್ನತವಾಗಿತ್ತು. ಆರಕ್ಷಕರ, ಸ್ವಯಂ ಸೇವಕರ ಸೇವೆ ಶ್ಲಾಘನೀಯ. ಅಂತೂ 144 ವರ್ಷಕೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಭಕ್ತರ ಸುನಾಮಿಯಲ್ಲಿ ಮಿಂದು ಧನ್ಯರಾದೆವು. ನಂತರ ಟ್ಯಾಕ್ಸಿ ಬಳಿಗೆ ಬರುವ ದಾರಿಯಲ್ಲಿ ಶ್ರೀರಾಮಕೃಷ್ಣ ಮಠದ ಯತಿಗಳು ಸಿಕ್ಕಿದರು. ಅವರಿಗೆ ಪ್ರಣಾಮ ಸಲ್ಲಿಸಿ ನಾಗಸಾಧುಗಳ ದರ್ಶನ ಮಾಡಿದ ನಂತರ ಟ್ಯಾಕ್ಸಿಯಲ್ಲಿ ಶ್ರೀರಾಮಕೃಷ್ಣ ಮಠಕ್ಕೆ ತೆರಳಿ ಗುರು ಮಹಾರಾಜರ ದರ್ಶನ ಪಡೆದು ಗೋರಕ್ ಪುರಕ್ಕೆ ಹೊರಟೆವು. ಗೋರಕ್ಪುರದಲ್ಲಿ ಗೋರಕನಾಥನ ದರ್ಶನ ಪಡೆದು ಶ್ರೀರಾಮಕೃಷ್ಣ ಮಠಕ್ಕೆ ಭೇಟಿ ಕೊಟ್ಟೆವು. ಅಲ್ಲಿಯೂ ದಿವ್ಯತ್ರಯರ ದರ್ಶನ ಪಡೆದು ಮರುದಿನ ಬೆಂಗಳೂರಿಗೆ ವಾಪಸ್ಸು ಬಂದೆವು. ಒಟ್ಟಿನಲ್ಲಿ ಹೇಳುವುದಾದರೆ ಒಂದು ಪವಿತ್ರವಾದ ಮುಳುಗಿ ಗೋಸ್ಕರ ಜನರ ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿ-ನಂಬಿಕೆ ಬೆಲೆ ಕಟ್ಟಲಾಗದು. ಇಂತಹ ಆಧ್ಯಾತ್ಮಿಕ ಯಾತ್ರೆಯಲ್ಲಿ ಮಿಂದೆದ್ದ ನಮ್ಮ ಜೀವನದ ಪಯಣದಲಿ ಮಹಾ ಕುಂಭಮೇಳ ಯಾತ್ರೆಯು ಒಂದು ಮರೆಯಲಾಗದ ಅಮೃತಾ ಅನುಭವವಾಗಿ ಉಳಿಯುತ್ತದೆ.
ಬರಹ-ಶ್ರೀಮತಿ ಜಯಂತಿ ಸುರೇಶ್ ಮತ್ತು ತಂಡ,
ಕ್ಷೇಮಂಕರಿ ಸತ್ಸಂಗ ಕೇಂದ್ರ, ವಿಜಯನಗರ,
ಬೆಂಗಳೂರು. ದೂರವಾಣಿ -8884509586