ಯುಗಾದಿಯ ಬೇವು-ಬೆಲ್ಲ ಬದುಕಿನ ಸುಖ-ದುಖದ ಒಳಾರ್ಥ – ಹೆಚ್.ಲಕ್ಷ್ಮೀದೇವಮ್ಮ.
ಚಳ್ಳಕೆರೆ ಮಾ.28
ಚಂದ್ರಮಾನ ಯುಗಾದಿ ಯೆಂದು ಸೇವಿಸಲಾಗುವ ಬೇವು ಮತ್ತು ಬೆಲ್ಲ ಬದುಕಿನ ಸುಖ-ದುಖದ ಸಂಕೇತವಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ತಿಳಿಸಿದರು. ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ ಅವರ ವಾಲ್ಮೀಕಿ ನಗರದ ಸಹ್ಯಾದ್ರಿ ನಿವಾಸದಲ್ಲಿ “ಯುಗಾದಿ ಹಬ್ಬ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ‘ಯುಗಾದಿ ಹಬ್ಬದ ವಿಶೇಷತೆ’ ಯ ಬಗ್ಗೆ ಉಪನ್ಯಾಸ ನೀಡಿದರು. ಯುಗಾದಿ ಹಬ್ಬವನ್ನು ಚೈತ್ರ ಶುದ್ಧ ಪಾಡ್ಯದಂದು ಆಚರಿಸಲಾಗುತ್ತದೆ. ಅಂದು ಮನೆಯ ಬಾಗಿಲಿಗೆ ಮಾವಿನ- ಬೇವಿನ ತೋರಣಗಳಿಂದ ಅಲಂಕರಿಸಿ ಮನೆಯ ಸದಸ್ಯರು ಮೈಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿ ಬೇವು-ಬೆಲ್ಲ ತಿಂದು ಜೀವನದ ಸುಖ-ದುಖಗಳನ್ನು ಸಮಾನವಾಗಿ ಸ್ವೀಕರಿಸುವ ಸತ್ಸಂಕಲ್ಪವನ್ನು ಮಾಡುವ ಪರ್ವ ಕಾಲವಿದು.

ಜೊತೆಗೆ ವಿವಿಧ ರೀತಿಯ ಸಿಹಿ ಅಡಿಗೆಗಳನ್ನು ಸೇವಿಸುವ ಕ್ರಮವಿದೆ. ಯುಗಾದಿಯ ಮಾರನೆಯ ದಿನ ಸಂಜೆ ಚಂದ್ರ ದರ್ಶನವನ್ನು ಮಾಡಿ ಕೊಂಡು ದೇವರಿಗೆ-ಗುರು- ಹಿರಿಯರಿಗೆ ನಮಸ್ಕರಿಸುವ ವಾಡಿಕೆ ಈಗಲೂ ಮುಂದುವರಿದಿದೆ ಎಂದರು.ಹಿಂದೂ ಪುರಾಣಗಳ ಪ್ರಕಾರ ಬ್ರಹ್ಮ ದೇವರು ಯುಗಾದಿ ದಿನದಂದು ಬ್ರಹ್ಮಾಂಡ ಸೃಷ್ಟಿಯನ್ನು ಪ್ರಾರಂಭಿಸಿದರು ಎನ್ನುವ ಉಲ್ಲೇಖವಿದೆ ಎಂದು ಹೇಳಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಾದ ಸಾಮೂಹಿಕ “ಶ್ರೀರಾಮರಕ್ಷಾ ಸ್ತೋತ್ರ” ಪಠಣ,ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಶ್ರೀಶಾರದಾಶ್ರಮದ ಸ್ವಯಂ ಸೇವಕ ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರು. ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಎಂ.ಗೀತಾ ನಾಗರಾಜ್ ಮೋಹಿನಿ, ತಿಪ್ಪಮ್ಮ ಉಮಾಶಂಕರ್, ವಿಶಾಲಾಕ್ಷಿ ಪುಟ್ಟಣ್ಣ, ಸಿದ್ದಮ್ಮ, ಗಿರಿಜಾಮ್ಮ,ಬಿ.ಟಿ. ಗಂಗಾಂಬಿಕೆ, ಗಾಯತ್ರಿ,ಕೆ.ಎಲ್ ವಸಂತಕುಮಾರಿ ಜಯಪ್ರಕಾಶ್, ಸುಜಾತ ಸೇರಿದಂತೆ ಆಶ್ರಮದ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.